ಬೆಂಗಳೂರು: ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಸಿ.ಜಿ. ಮಧುಸೂದನ್ ಅವರು ಬೆಂಗಳೂರಿನಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿದರು.
ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ, ಯುವ ನಾಯಕತ್ವದಲ್ಲಿ ಶಿವಮೊಗ್ಗ ಹಾಗೂ ಭದ್ರಾವತಿ ಅವಳಿ ನಗರಗಳು ಮೂಲಸೌಕರ್ಯ, ಸುಸಂಘಟಿತ ನಗರ ಯೋಜನೆ ಮತ್ತು ಸಮಗ್ರ ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೇರಲಿ ಎಂದು ಆಶಿಸಿದರು. ಮಧುಸೂದನ್ ಅವರು ಸಚಿವರನ್ನು ಸನ್ಮಾನಿಸಲು ಮುಂದಾದಾಗ, “ಯುವಕರು ರಾಜಕೀಯದಲ್ಲಿ ಇನ್ನಷ್ಟು ಬೆಳೆಯಬೇಕು, ಈ ಸನ್ಮಾನ ನಿಮಗೆ ಸಲ್ಲಬೇಕು” ಎಂದು ಹೇಳಿ ಸಚಿವರೇ ಮಧುಸೂದನ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಬಳಿಕ ಶಿವಮೊಗ್ಗದಿಂದ ಆಗಮಿಸಿದ್ದ ಮುಖಂಡರೊಂದಿಗೆ ಮಾತನಾಡಿದ ಸಚಿವರು, ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಯುವ ನಾಯಕರು ಸಂಘಟಿತವಾಗಿ ಕೆಲಸ ಮಾಡಬೇಕು. ರಾಹುಲ್ ಗಾಂಧಿ ಅವರ ಆಶಯದಂತೆ ಯುವಕರ ಕೈಗೆ ಅಧಿಕಾರ ಸಿಗುತ್ತಿದ್ದು, ಪಕ್ಷದ ಶಕ್ತಿ ವೃದ್ಧಿಗೆ ಹಾಗೂ ಎಸ್‌ಐಆರ್ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಹೇಳಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು, ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್, ಜವಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.