ಶಿವಮೊಗ್ಗ: ಯೂಟ್ಯೂಬ್ನಲ್ಲಿ ಪ್ರಕಟವಾದ ಷೇರು ಮಾರುಕಟ್ಟೆ ಜಾಹೀರಾತು ನಂಬಿ, ಹಣ ಹೂಡಿಕೆ ಮಾಡಿದ್ದ ಶಿವಮೊಗ್ಗದ ಉದ್ಯೋಗಿಯೊಬ್ಬರು ₹10.49 ಲಕ್ಷ ಹಣ ಕಳೆದುಕೊಂಡಿದ್ದಾರೆ. ನಿವೃತ್ತ ಉದ್ಯೋಗಿಯು ಆಗಸ್ಟ್ 22 ರಂದು ಮನೆಯಲ್ಲಿದ್ದಾಗ ಯೂಟ್ಯೂಬ್ ವೀಕ್ಷಿಸುತ್ತಿದ್ದರು. ಈ ವೇಳೆ ಕಂಪನಿಯೊಂದರ ಹೆಸರಿನಲ್ಲಿ ಷೇರು ಮಾರುಕಟ್ಟೆ ಹೂಡಿಕೆಯ ಜಾಹೀರಾತು ಕಾಣಿಸಿತ್ತು.
ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ತಿಳಿಸಲಾಗಿತ್ತು. ಜಾಹೀರಾತಿನಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ವಾಟ್ಸಾಪ್ ಗ್ರೂಪ್ಗೆ ಸೇರಿಸಲಾಗಿತ್ತು. ಬಳಿಕ ವಾಟ್ಸಾಪ್ನಲ್ಲಿ ಚಾಟಿಂಗ್ ಮಾಡಿದ ಕಂಪನಿಯರು, ಆರಂಭಿಕ ಹೂಡಿಕೆಯಾಗಿ ₹50,000 ಪಾವತಿಸುವಂತೆ ಸೂಚಿಸಿದ್ದರು. ಅದನ್ನು ನಂಬಿದ ನಿವೃತ್ತ ಉದ್ಯೋಗಿ ಆಗಸ್ಟ್ 24 ರಂದು ಯುಪಿಐ ಮೂಲಕ ₹50,000 ಹಣವನ್ನು ಅವರು ಸೂಚಿಸಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು.

ನಂತರ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಒಟ್ಟು ₹10,49,156 ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ನಂತರ ವಂಚಕರು ಹೊಸ ಐಪಿಒ ಅಲಾಟ್ಮೆಂಟ್ಗೆ ₹74 ಲಕ್ಷ ಹಣ ಪಾವತಿಸುವಂತೆ ಒತ್ತಾಯಿಸಿದ್ದರು. ಇದರಿಂದ ಅನುಮಾನಗೊಂಡ ನಿವೃತ್ತ ಉದ್ಯೋಗಿ ತಮ್ಮ ಖಾತೆಯಲ್ಲಿದ್ದ ಹಣ ವಿತ್ಡ್ರಾ ಮಾಡಲು ಯತ್ನಿಸಿದಾಗ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.