ಶಿವಮೊಗ್ಗ: ರೈತ ಸ್ವಾಭಿಮಾನ ಯಾತ್ರೆಯಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ಆಗಮಿಸಿದ ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಕಾರ್ಯಕರ್ತರು ಬೈಕ್ ಜಾಥಾ ಮಾಡಿ ಸ್ವಾಗತಿಸಿದರು.
ಹೊಳೆ ಬಸ್ ನಿಲ್ದಾಣದ ಬಳಿ ಜೆಡಿಎಸ್ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು. ಈ ಸಂದರ್ಭ ಜೆಡಿಎಸ್ ಪಕ್ಷದ ಕಾರ್ಯಕರ್ತೆಯರು ನಿಖಿಲ್ ಕುಮಾರಸ್ವಾಮಿ ಅವರಿಗೆ ಹಸ್ತಲಾಘವ ಮಾಡಿ ಖುಷಿ ಪಟ್ಟರು. ಯುವ ಘಟಕದ ಕಾರ್ಯಕರ್ತರು ಬೈಕ್ ಜಾಥಾ ನಡೆಸಿದರು.

ಎಲ್ಲೆಲ್ಲಿ ಭೇಟಿ ನೀಡ್ತಾರೆ ನಿಖಿಲ್?
ನಿಖಿಲ್ ಕುಮಾರಸ್ವಾಮಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮತ್ತು ಭದ್ರಾವತಿಯಲ್ಲಿ ನಡೆಯುವ ರೈತ ಸ್ವಾಭಿಮಾನ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಆಯನೂರು ಕೋಟೆಯಿಂದ ಪಿಡ್ಬ್ಲುಡಿ ಇಲಾಖೆಯ ಪ್ರವಾಸಿ ಮಂದಿರದ ತನಕ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಬಹಿರಂಗ ಸಭೆಯಲ್ಲಿ ಮಾತನಾಡಲಿದ್ದಾರೆ. ಇಂದು ಮಧ್ಯಾಹ್ನ ಭದ್ರಾವತಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿ ತನಕ ಪಾದಯಾತ್ರೆ ನಡೆಸಿ, ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.