ಶಿವಮೊಗ್ಗ: ಜಿಲ್ಲೆಯಲ್ಲಿ 2022-23ನೇ ಸಾಲಿನಿಂದ ಈವರೆಗೆ ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ನಡೆಸಿದ ಕಾಮಗಾರಿಗಳ 1,800 ಕೋಟಿ ಬಾಕಿ ಹಣ ಬಿಡುಗಡೆ ಆಗಬೇಕಿದೆ ಎಂದು ಮಲೆನಾಡು ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಹೆಚ್.ಸಿ.ಉಮೇಶ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣ ಕಾಮಗಾರಿಗಳಿಗೆ ಮಾತ್ರ ಹಣ ಬಿಡುಗಡೆಯಾಗುತ್ತಿದೆ. ಇದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಮಗಾರಿ ಪೂರ್ಣಗೊಳಿಸಿ ಬಿಲ್ ಸಲ್ಲಿಸಿದ್ದರೂ ಪಾವತಿ ವಿಳಂಬವಾಗುತ್ತಿದೆ. ಕಾರ್ಮಿಕರಿಗೆ ವೇತನ ನೀಡುವುದು. ಕಾಮಗಾರಿಗೆ ಅಗತ್ಯ ಸಾಮಗ್ರಿ ಖರೀದಿಸುವುದು, ಬ್ಯಾಂಕ್ ಸಾಲ ಮರುಪಾವತಿ ಮಾಡುವುದು ಸಹ ಕಷ್ಟವಾಗಿದೆ. ದಸರಾ ಹಬ್ಬದ ವೇಳೆ ಕಾರ್ಮಿಕರಿಗೆ ವೇತನ ಮತ್ತು ಬೋನಸ್ ನೀಡಬೇಕಿದೆ. ಈಗಾಗಲೆ ಅನುದಾನ ಬಿಡುಗಡೆಯಾಗಿರುವ ಕಾಮಗಾರಿಗಳ ಬಾಕಿ ಬಿಲ್ಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ನೀರಾವರಿ ನಿಗಮದಲ್ಲಿ (ಕೆಎನ್ಎನ್ಎಲ್ ) ಬಿಲ್ಗಳು ಪಾವತಿಗೆ ಶಿಫಾರಸು ಆಗುವ ಮೊದಲು 15ಕ್ಕೂ ಹೆಚ್ಚು ಹಂತಗಳನ್ನು ದಾಟಬೇಕು. ಇದರಿಂದ ಪಾವತಿ ವಿಳಂಬವಾಗುತ್ತಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಅನುಸರಿಸುತ್ತಿರುವ ಸರಳ, ಪಾರದರ್ಶಕ ಹಾಗೂ ತ್ವರಿತ ಪಾವತಿ ವ್ಯವಸ್ಥೆಯನ್ನು ಕೆಎನ್ಎನ್ಎಲ್ನಲ್ಲಿಯೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕೆಎನ್ಎನ್ಎಲ್ನಲ್ಲಿ ಗುತ್ತಿಗೆದಾರರು ಠೇವಣಿ ಇಟ್ಟಿರುವ ಟೆಂಡರ್ ಪ್ರಕ್ರಿಯೆಯಲ್ಲಿನ ಅರ್ನೆಸ್ಟ್ ಮನಿ ಡೆಪಾಸಿಟ್ ಮತ್ತು ಭದ್ರತಾ ಠೇವಣಿ ಹಣ ಐದರಿಂದ ಆರು ವರ್ಷಗಳಿಂದ ಉಳಿದಿದೆ. ಈ ಹಣವನ್ನು ಇತರ ಗುತ್ತಿಗೆದಾರರ ಬಳಸಲಾಗಿದೆ ಎಂಬ ಆರೋಪದ ಕುರಿತು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಅಗತ್ಯ ದಾಖಲೆಗಳನ್ನು ಸಲ್ಲಿಸಿ ಬಿಲ್ ಪ್ರಕ್ರಿಯೆ ಪೂರ್ಣಗೊಳಿಸಿದರೂ, ಪಾವತಿ ವಿಳಂಬ ಮಾಡುವ ಅಧಿಕಾರಿಗಳ ಹೊಣೆಗಾರಿಕೆ ನಿಗದಿಪಡಿಸಬೇಕು. ಅನ್ವಯಿಸುವ ಕಾನೂನು ಮತ್ತು ನಿಯಮಗಳ ಪ್ರಕಾರ ವಿಳಂಬ ಪಾವತಿಗೆ ಬಡ್ಡಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು. ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಗುತ್ತಿಗೆದಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು.
– ಜಿ.ಎಂ. ಜಗದೀಶ್, ಸಂಘದ ಅಧ್ಯಕ್ಷ
ಸುದ್ದಿಗೋಷ್ಠಿಯಲ್ಲಿ ದೇವರಾಜ್, ಸಂತೋಷ್, ಚಂದ್ರು ಸೇರಿ ಹಲವರು ಇದ್ದರು.