ರೈಲ್ವೆ ಸುದ್ದಿ: ದಸರಾ ಹಾಗೂ ದೀಪಾವಳಿ ಹಬ್ಬಗಳ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಯಶವಂತಪುರ ಮತ್ತು ಶಿವಮೊಗ್ಗ ಟೌನ್ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲನ್ನು ತಾಳಗುಪ್ಪದವರೆಗೆ ತಾತ್ಕಾಲಿಕವಾಗಿ ವಿಸ್ತರಿಸಿ ನೈಋತ್ಯ ರೈಲ್ವೆ ಆದೇಶಿಸಿದೆ.
ರೈಲು ಸಂಖ್ಯೆ 16581/16582 ಯಶವಂತಪುರ–ಶಿವಮೊಗ್ಗ ಟೌನ್–ಯಶವಂತಪುರ ವಾರದಲ್ಲಿ ಮೂರು ದಿನ ಸಂಚರಿಸುವ ಎಕ್ಸ್ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ತಾಳಗುಪ್ಪದವರೆಗೆ ವಿಸ್ತರಿಸಲಾಗಿದೆ. ಅಕ್ಟೋಬರ್ 18 ರಿಂದ ನವೆಂಬರ್ 12 ರವರೆಗೆ ಈ ರೈಲು ಎರಡೂ ದಿಕ್ಕುಗಳಲ್ಲಿ ತಲಾ 11 ಟ್ರಿಪ್ ಸಂಚರಿಸಲಿದೆ. ರೈಲು ಸಂಖ್ಯೆ 16581 ಯಶವಂತಪುರದಿಂದ ಮಧ್ಯರಾತ್ರಿ 12:15 ಕ್ಕೆ ಹೊರಟು ಬೆಳಿಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದೆ. ರೈಲು ಸಂಖ್ಯೆ 16582 ತಾಳಗುಪ್ಪದಿಂದ ರಾತ್ರಿ 10 ಗಂಟೆಗೆ ಹೊರಟು ನಿಗದಿತ ಸಮಯಕ್ಕೆ ಯಶವಂತಪುರ ತಲುಪಲಿದೆ.

ಈ ರೈಲು ಕೊನಗವಳ್ಳಿ, ಹಾರನಹಳ್ಳಿ, ಕುಂಸಿ, ಅರಸಾಳು, ಕೆಂಚನಾಳು, ಆನಂದಪುರ, ಅಡ್ಡೇರಿ ಹಾಗೂ ಸಾಗರ ಜಂಬಗಾರು ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲಲಿದೆ. ಯಶವಂತಪುರ ಮತ್ತು ಶಿವಮೊಗ್ಗ ಟೌನ್ ನಡುವಿನ ರೈಲು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.