ಶಿವಮೊಗ್ಗ: ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಸಕ್ರೆಬೈಲು ಬಿಡಾರದ ಮೂರು ಆನೆಗಳು ಶಿವಮೊಗ್ಗ ನಗರಕ್ಕೆ ಆಗಮಿಸಿವೆ. ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಮೂರು ಆನೆಗಳಿಗೆ ಪೂಜೆ ಸಲ್ಲಿಸಿ, ನಗರಕ್ಕೆ ಸ್ವಾಗತಿಸಲಾಯಿತು. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್.ಕಾಂ ವೆಬ್ಸೈಟ್ನಲ್ಲಿ. ಈ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.
ಸಕ್ರೆಬೈಲು ಬಿಡಾರದ ಸಾಗರ್, ಸೋಮಣ್ಣ ಮತ್ತು ಬಹದ್ದೂರ್ ಆನೆಗಳು ಶಿವಮೊಗಕ್ಕೆ ಆಗಮಿಸಿವೆ. ಲಾರಿಯಲ್ಲಿ ಆನೆಗಳನ್ನು ಕರೆತರಲಾಯಿತು. ಕೋಟೆ ರಸ್ತೆಯಲ್ಲಿ ಆನೆಗಳನ್ನು ಲಾರಿಯಿಂದ ಇಳಿಸಿ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆ ತರಲಾಯಿತು. ಅರ್ಚಕ ರಾಮಪ್ರಸಾದ್ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು.

ಪೂಜೆ ವೇಳೆ ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ಜಗದೀಶ್, ಪಾಲಿಕೆ ಅಧಿಕಾರಿಗಳು, ಮಾಜಿ ಕಾರ್ಪೊರೇಟರ್ಗಳು ಸೇರಿದಂತೆ ಹಲವರು ಇದ್ದರು. ಆನೆಗಳು ಬಂದಿರುವ ವಿಷಯ ತಿಳಿದು ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ದೇವಸ್ಥಾನದ ಆವರಣಕ್ಕೆ ಆಗಮಿಸಿದ್ದರು. ಜನರು ಆನೆಗಳ ಫೋಟೊ, ವಿಡಿಯೋ ಮಾಡಿಕೊಂಡು ಸಂಭ್ರಮಿಸಿದರು.
ಕೋಟೆ ರಸ್ತೆಯಲ್ಲಿ ವಾಸ್ತವ್ಯ
ಪ್ರತಿ ವರ್ಷ ಆನೆಗಳಿಗೆ ತಂಗಲು ವಾಸವಿ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಅಲ್ಲಿ ವ್ಯವಸ್ಥೆ ಇಲ್ಲವಾಗಿದೆ. ಹಾಗಾಗಿ ಆನೆಗಳಿಗೆ ಕೋಟೆ ರಸ್ತೆಯಲ್ಲಿ ಖಾಲಿ ನಿವೇಶನದ ಸ್ಥಳದಲ್ಲಿ ಉಳಿಸಲಾಗಿದೆ. ಮೂರು ಆನೆಗಳು ದಸರಾ ಜಂಬೂ ಸವಾರಿ ತನಕ ಇದೇ ಜಾಗದಲ್ಲಿ ಉಳಿಯಲಿವೆ. ಸುರಕ್ಷತೆ ದೃಷ್ಟಿಯಿಂದ ಆನೆಗಳ ಸಮೀಪಕ್ಕೆ ಹೋಗಲು ಯಾರಿಗು ಅವಕಾಶ ಇಲ್ಲವಾಗಿದೆ. ಸಕ್ರೆಬೈಲು ಬಿಡಾರದ ಸಿಬ್ಬಂದಿಗೆ ಮಾತ್ರ ಆನೆಗಳ ಬಳಿ ಇರಬಹುದಾಗಿದೆ.
ಇಂದಿನಿಂದ ತಾಲೀಮು ಆರಂಭ
ಶಿವಮೊಗ್ಗದಲ್ಲಿ ಸಾಗರ್ ಆನೆ ನಾಡದೇವಿ ಚಾಮುಂಡೇಶ್ವರಿಯ ಮೂರ್ತಿ ಮತ್ತು ಬೆಳ್ಳಿ ಅಂಬಾರಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಲಿದೆ. ಸೋಮಣ್ಣ ಮತ್ತು ಬಹದ್ದೂರ್ ಆನೆಗಳು ಸಾಲಾನೆಗಳಾಗಿ ಭಾಗವಹಿಸಲಿವೆ. ಜಂಬೂ ಸವಾರಿಯು ಕೋಟೆ ರಸ್ತೆ, ಗಾಂಧಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಜೈಲ್ ರಸ್ತೆ ಮೂಲಕ ಫ್ರೀಡಂ ಪಾರ್ಕ್ ತನಕ ಸಾಗಲಿದೆ. ಈ ಮಾರ್ಗದಲ್ಲಿ ಸಾಗಲು ಮತ್ತು ಜನ ಜಂಗುಳಿ, ವಾಹನ ದಟ್ಟಣೆಗೆ ಆನೆಗಳು ಹೊಂದಿಕೊಳ್ಳಲು ತಾಲೀಮು ನಡೆಸಬೇಕಿದೆ. ಶುಕ್ರವಾರದಿಂದಲೇ ತಾಲೀಮು ಆರಂಭವಾಗಲಿದೆ.