ಡಾಕ್ಟರ್‌ ಅಪಾಯಿಂಟ್‌ಮೆಂಟ್‌ಗೆ ಕರೆ ಮಾಡಿದ ಶಿಕ್ಷಕಿ ₹1.76 ಹಣ ಕಳೆದುಕೊಂಡರು, ಹೇಗದು?

ಶಿವಮೊಗ್ಗ: ವೈದ್ಯರ ಅಪಾಯಿಂಟ್‌ಮೆಂಟ್ ಪಡೆಯಲು ಗೂಗಲ್‌ನಲ್ಲಿ ಫೋನ್ ನಂಬರ್ ಹುಡುಕಿ ಕರೆ ಮಾಡಿದ ಶಿಕ್ಷಕಿಯೊಬ್ಬರು ₹1.76 ಲಕ್ಷ ಹಣ ಕಳೆದುಕೊಂಡಿದ್ದಾರೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಶಿಕ್ಷಕಿಯ ಸಹೋದ್ಯೋಗಿಯ ಅತ್ತೆಗೆ ಶಿವಮೊಗ್ಗದ ಆಸ್ಪತ್ರೆಯೊಂದರ ವೈದ್ಯರಿಂದ ಚಿಕಿತ್ಸೆಗಾಗಿ ಅಪಾಯಿಂಟ್‌ಮೆಂಟ್ ಬೇಕಿತ್ತು. ಸಹೋದ್ಯೋಗಿ ಗೂಗಲ್‌ನಲ್ಲಿ ಹುಡುಕಿದಾಗ ಒಂದು ಮೊಬೈಲ್ ಸಂಖ್ಯೆ ಲಭಿಸಿತ್ತು. ಆ ಸಂಖ್ಯೆಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿ ಮಾತನಾಡಿದ್ದ. ಹಿಂದಿ ಭಾಷೆ ಬಾರದ ಸಹೋದ್ಯೋಗಿ ಅವರು ಶಿಕ್ಷಕಿಗೆ ಆ ಮೊಬೈಲ್ ಸಂಖ್ಯೆ ಕಳುಹಿಸಿ ಅಪಾಯಿಂಟ್‌ಮೆಂಟ್‌ ಕೊಡಿಸುವಂತೆ ತಿಳಿಸಿದ್ದರು.

SMS-Fraud-Shimoga-CEN-Police-Station.

ಶಿಕ್ಷಕಿ ಆ ನಂಬರ್‌ಗೆ ಕರೆ ಮಾಡಿದಾಗ, ವ್ಯಕ್ತಿಯು ಹಿಂದಿಯಲ್ಲಿ ಮಾತನಾಡಿ ಆಸ್ಪತ್ರೆ ಅಪಾಯಿಂಟ್‌ಮೆಂಟ್ ಫಾರ್ಮ್ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ. ನಂತರ ಶಿಕ್ಷಕಿಯ ವಾಟ್ಸಾಪ್‌ಗೆ Hospital appointment.apk ಹೆಸರಿನ ಎಪಿಕೆ ಫೈಲ್ ಕಳುಹಿಸಿದ್ದರು. ಇದನ್ನು ನಿಜವೆಂದು ನಂಬಿದ ಶಿಕ್ಷಕಿ ಎಪಿಕೆ ಫೈಲ್ ಓಪನ್ ಮಾಡಿ ರೋಗಿಯ ಹೆಸರು, ವಯಸ್ಸು ಸೇರಿ ವಿವರ ಭರ್ತಿ ಮಾಡಿ ಸಲ್ಲಿಸಿದ್ದರು. ಅಪಾಯಿಂಟ್‌ಮೆಂಟ್ ಶುಲ್ಕ ಪಾವತಿಸಲು ಯತ್ನಿಸಿದಾಗ ಪೇಮೆಂಟ್ ಫೇಲ್ಡ್ ಎಂದು ಬಂದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ 14 ರಂದು ಶಿಕ್ಷಕಿ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡ ಮೆಸೇಜ್‌ಗಳು ಬಂದಿದ್ದವು. ವಂಚಕರು ಎಪಿಕೆ ಫೈಲ್ ಮೂಲಕ ಮೊಬೈಲ್‌ನಲ್ಲಿದ್ದ ವೈಯಕ್ತಿಕ ಮಾಹಿತಿ ಕದ್ದು, ಕೆನರಾ ಬ್ಯಾಂಕ್‌ನ ಎರಡು ಖಾತೆಗಳಿಂದ ₹1,53,220 ಹಾಗೂ ₹18,271 ಮತ್ತು ಎಸ್‌ಬಿಐ ಬ್ಯಾಂಕ್ ಖಾತೆಯಿಂದ ₹4,955 ಸೇರಿ ಒಟ್ಟು ₹1,76,446 ನಗದು ಹಣ ದೋಚಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.