ಶಿವಮೊಗ್ಗ: ಅಕ್ಕ ಪಡೆಯ ಕಾರ್ಯಾಚರಣೆಯನ್ನು ನಗರ ಪ್ರದೇಶಕ್ಕೆ ಸೀಮಿತಗೊಳಿಸದೆ, ತಾಲ್ಲೂಕು ಮಟ್ಟ ಹಾಗೂ ಗ್ರಾಮೀಣ ಭಾಗಗಳಿಗೂ ವಿಸ್ತರಿಸಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಸೂಚಿಸಿದರು. (ಈ ಸುದ್ದಿಯನ್ನು ಇನ್ನು 86 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಿದ್ದ ಅಕ್ಕ ಪಡೆ ಯೋಜನೆಯ ಜಿಲ್ಲಾ ಸಮನ್ವಯ ಸಮಿತಿಯ ಎರಡನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕ್ಕ ಪಡೆಯ ಕಾರ್ಯವೈಖರಿಯನ್ನು ಪರಿಶೀಲಿಸಿದ ಅವರು, ಪ್ರಗತಿ ವರದಿ ವೀಕ್ಷಿಸಿ ತಂಡದ ಕೆಲಸ ಶ್ಲಾಘಿಸಿದರು.

ಹೋಟೆಲ್, ಲಾಡ್ಜ್ ತಪಾಸಣೆ ನಿರ್ದೇಶನ
ಅನುಮಾನಸ್ಪದ ಹಾಗೂ ಅಪರಿಚಿತ ವ್ಯಕ್ತಿಗಳ ಓಡಾಟದ ಮೇಲೆ ಕಣ್ಣಿಡಲು ಹೋಟೆಲ್ ಹಾಗೂ ಲಾಡ್ಜ್ಗಳ ರಿಜಿಸ್ಟರ್ಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು. ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಕುರಿತು ಅರಿವು ಮೂಡಿಸುವ ಐಇಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ಭಿಕ್ಷಾಟನೆ, ಬಾಲಕಾರ್ಮಿಕ ಪದ್ಧತಿ ಹಾಗೂ ಸಂಕಷ್ಟಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿ ಸಖಿ ಕೇಂದ್ರ ಹಾಗೂ ನಿರಾಶ್ರಿತರ ಕೇಂದ್ರಗಳಿಗೆ ದಾಖಲಿಸಬೇಕು. ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಹೆಚ್ಚಿನ ಕರೆಗಳು ಬರುವ ಹಾಟ್ಸ್ಪಾಟ್ ಪ್ರದೇಶಗಳನ್ನು ಗುರುತಿಸಿ, ಆ ಸ್ಥಳಗಳಿಗೆ ಅಕ್ಕ ಪಡೆ ಸಿಬ್ಬಂದಿ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದರು.
3 ತಿಂಗಳಲ್ಲಿ 685 ರಕ್ಷಣೆ
ಜುಲೈಯಿಂದ ಸೆಪ್ಟೆಂಬರ್ ಅವಧಿಯ ಪ್ರಗತಿ ವರದಿ ಪ್ರಸ್ತಾಪಿಸಿದ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್, ಅಕ್ಕ ಪಡೆ ತಂಡವು ಮೂರು ತಿಂಗಳಲ್ಲಿ ಶಾಲೆ, ಕಾಲೇಜು, ಹಾಸ್ಟೆಲ್, ಬಸ್ ನಿಲ್ದಾಣ, ಆಸ್ಪತ್ರೆ, ಉದ್ಯಾನವನ, ಹೋಟೆಲ್ ಹಾಗೂ ಮಾರುಕಟ್ಟೆ ಸೇರಿ ಒಟ್ಟು 1,158 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಮಹಿಳಾ ಜಾಗೃತಿಗೆ ಸಂಬಂಧಿಸಿದಂತೆ 83 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ ಎಂದರು.
ಭಿಕ್ಷಾಟನೆ, ಬಾಲಕಾರ್ಮಿಕ, ಕೌಟುಂಬಿಕ ದೌರ್ಜನ್ಯ, ಅನಾಥ ಹಾಗೂ ನಿರ್ಗತಿಕ ಮಹಿಳೆ ಮತ್ತು ಮಕ್ಕಳ ರಕ್ಷಣೆ ಒಳಗೊಂಡಂತೆ ಒಟ್ಟು 685 ರಕ್ಷಣೆ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಡಿಡಿಪಿಯು, ಡಿಡಿಪಿಐ, ಸಮಾಜ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.