ಶಿವಮೊಗ್ಗ: ರಿಂಗ್ ರಸ್ತೆಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಯುವಕನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಹಲ್ಲೆ ನಡೆಸಿ ₹27,000 ಮೌಲ್ಯದ ಎರಡು ಮೊಬೈಲ್ ಫೋನ್ಗಳನ್ನು ದೋಚಿ ಪರಾರಿಯಾಗಿದ್ದಾರೆ. (ಈ ಸುದ್ದಿಯನ್ನು ಇನ್ನು 36 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಬಸವಾಪುರ ಗ್ರಾಮದ ಫೋಟೋಗ್ರಾಫರ್ ಯಶ್ವಂತ್.ಆರ್ ಎಂಬುವವರ ಕೆಲಸ ಮುಗಿಸಿ ಅ.20ರ ರಾತ್ರಿ ಮನೆಗೆ ತೆರಳುತ್ತಿದ್ದರು. ಪೋದಾರ್ ಶಾಲೆ ಬಳಿಯ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದಾಗ, ಎರಡು ಬೈಕ್ಗಳಲ್ಲಿ ಬಂದ 3 ರಿಂದ 4 ಮಂದಿ ದುಷ್ಕರ್ಮಿಗಳು ಯಶ್ವಂತ್ ಅವರನ್ನು ತಡೆದು ನಿಲ್ಲಿಸಿದೆ. ಆ ಪೈಕಿ ಒಬ್ಬ ಯುವಕ ಯಶ್ವಂತ್ ಅವರ ಬಳಿ ಇದ್ದ ₹15,000 ಮೌಲ್ಯದ ಒಪ್ಪೋ ಕಂಪನಿಯ ಮೊಬೈಲ್ ಕಸಿದುಕೊಂಡಿದ್ದಾನೆ.

ನಂತರ ಮತ್ತೊಬ್ಬ ಆರೋಪಿ ಹಣ ನೀಡುವಂತೆ ಬೆದರಿಸಿದ್ದು, ಹಣವಿಲ್ಲ ಎಂದಾಗ ಕಪಾಳಕ್ಕೆ ಹೊಡೆದು, ಪ್ಯಾಂಟ್ ಜೇಬಿನಲ್ಲಿದ್ದ ₹12,000 ಮೌಲ್ಯದ ಐಫೋನ್ 6ಎಸ್ ಮೊಬೈಲ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.