ರೈಲ್ವೆ ಇಲಾಖೆಗೆ ದಂಡ ವಿಧಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ, ಕಾರಣವೇನು?

ಶಿವಮೊಗ್ಗ: ರೈಲಿನಲ್ಲಿ ನೀರಿನ ಸೌಲಭ್ಯ ಕಲ್ಪಿಸದೆ ಸೇವಾ ನ್ಯೂನ್ಯತೆ ಎಸಗಿದ ಭಾರತೀಯ ರೈಲ್ವೆ ಇಲಾಖೆಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿದೆ. ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರ ಹಾಗೂ ಟಿಕೆಟ್ ಹಣ ಮರಳಿಸುವಂತೆ ಆದೇಶಿಸಿದೆ. (ಈ ಸುದ್ದಿಯನ್ನು ಇನ್ನು 68 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗದ ಬಸವನಗುಡಿ ಪಿಡಬ್ಲ್ಯೂಡಿ ವಸತಿ ಗೃಹದ ನಿವಾಸಿ ನಾಗೇಂದ್ರ ಅವರು ತಮ್ಮ ಕುಟುಂಬ ಹಾಗೂ ಸಂಬಂಧಿಕರು ಸೇರಿ ಒಟ್ಟು 24 ಜನರೊಂದಿಗೆ ತಿರುಪತಿ ಪ್ರವಾಸ ಮುಗಿಸಿ ವಾಪಸಾಗುತ್ತಿದ್ದರು. ಯಶವಂತಪುರದಿಂದ ಶಿವಮೊಗ್ಗಕ್ಕೆ ತೆರಳಲು ₹1,000 ಪಾವತಿಸಿ ರೈಲಿನಲ್ಲಿ ಟಿಕೆಟ್‌ಗಳನ್ನು ಪಡೆದು ಪ್ರಯಾಣ ಆರಂಭಿಸಿದ್ದರು. ಆದರೆ ರೈಲಿನ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆಯೇ ಇರಲಿಲ್ಲ.

Shivamogga-Consumer-Court-lodges-fine-against-Railway-Department

ನೀರಿಲ್ಲದೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಈ ಕುರಿತು ತುಮಕೂರು ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್‌ಗೆ ದೂರು ನೀಡಿದರೂ ಸ್ಪಂದನೆ ಸಿಗಲಿಲ್ಲ. ಅನಿವಾರ್ಯವಾಗಿ ತುಮಕೂರಿನಲ್ಲಿಯೇ ರೈಲಿನಿಂದ ಕೆಳಗಿಳಿದ ಪ್ರಯಾಣಿಕರು, ಹೆಚ್ಚುವರಿಯಾಗಿ ₹1,760 ವೆಚ್ಚ ಮಾಡಿ ಮತ್ತೊಂದು ಎಕ್ಸ್‌ಪ್ರೆಸ್ ರೈಲಿನಲ್ಲಿ ಶಿವಮೊಗ್ಗ ತಲುಪಿತು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ ನೋಟಿಸ್ ನೀಡಿದರೂ ಸೂಕ್ತ ಉತ್ತರ ಬಾರದಿದ್ದಾಗ ನಾಗೇಂದ್ರ ಅವರು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠವು ಅಕ್ಟೋಬರ್ 17 ರಂದು ಪ್ರಮುಖ ತೀರ್ಪು ನೀಡಿದೆ. ಟಿಕೆಟ್ ಮೊತ್ತ ₹1,000 ಅನ್ನು ಏಪ್ರಿಲ್ 15 ರಿಂದ ಅನ್ವಯವಾಗುವಂತೆ ಶೇ. 6 ರ ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಬೇಕು. ತಪ್ಪಿದ್ದಲ್ಲಿ ಶೇ.10ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಜೊತೆಗೆ ಸೇವಾ ನ್ಯೂನ್ಯತೆಗೆ ಪರಿಹಾರವಾಗಿ ₹10,000 ಹಾಗೂ ದೂರಿನ ವೆಚ್ಚವಾಗಿ ₹5,000 ನೀಡಲು ರೈಲ್ವೆ ಇಲಾಖೆಗೆ ಆಯೋಗವು ಅಕ್ಟೋಬರ್ 23 ರಂದು ನಿರ್ದೇಶನ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.