ಚಂದ್ರಗುತ್ತಿ ದೇವಸ್ಥಾನಕ್ಕೆ ಉಪ ವಿಭಾಗಾಧಿಕಾರಿ ಭೇಟಿ, ಪರಿಶೀಲನೆ, ಅಧಿಕಾರಿಗಳಿಗೆ ಮಹತ್ವದ ಸೂಚನೆ

ಸೊರಬ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದ ಆವರಣದಲ್ಲಿ ಕೈಗೊಳ್ಳಬೇಕಿರುವ ವಿವಿಧ ಅಭಿವೃದ್ಧಿ ಯೋಜನಾ ಕಾಮಗಾರಿಗಳಿಗೆ ಸಾಗರ ಉಪವಿಭಾಗಾಧಿಕಾರಿ ವೀರೇಶ್‌ ಕುಮಾರ್ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. (ಈ ಸುದ್ದಿಯನ್ನು ಇನ್ನು 50 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಈ ವೇಳೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಉಪವಿಭಾಗಾಧಿಕಾರಿ, “ಧಾರ್ಮಿಕ ಕ್ಷೇತ್ರಕ್ಕೆ ನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಆದ್ದರಿಂದ ಸಾರ್ವಜನಿಕರು ಹಾಗೂ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡು, ನಿಗದಿತ ಸಮಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು” ಎಂದು ತಿಳಿಸಿದರು.

Assistant-Commissioner-Veeresh-Visits-Chandragutti-temple

ಅನುದಾನ ಪಾರದರ್ಶಕವಾಗಿ ಬಳಕೆಯಾಗಲಿ

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್. ಗಣಪತಿ ಹುಲ್ತಿಕೊಪ್ಪ ಮಾತನಾಡಿ, “ಚಂದ್ರಗುತ್ತಿ ಕ್ಷೇತ್ರದ ಧಾರ್ಮಿಕ ಪ್ರಾಮುಖ್ಯತೆಯನ್ನು ಪರಿಗಣಿಸಿ ಸಚಿವರು ₹2.84 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ. ಈ ಮೊತ್ತವನ್ನು ಪಾರದರ್ಶಕವಾಗಿ ಭಕ್ತರ ಮೂಲಸೌಕರ್ಯಕ್ಕೆ ಪೂರಕವಾಗುವಂತಹ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು. ಗುತ್ತಿಗೆದಾರರು ಕಾಮಗಾರಿಯ ಗುಣಮಟ್ಟ ಕಾಪಾಡಿಕೊಂಡು ನಿಗದಿತ ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು” ಎಂದರು.

ಸ್ಥಳ ಪರಿಶೀಲನೆ ವೇಳೆ ತಹಶೀಲ್ದಾರ್ ಪುರಂದರ ಕೆ., ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಪಿ. ರತ್ನಾಕರ, ಮಾಜಿ ಉಪಾಧ್ಯಕ್ಷ ರೇಣುಕಾಪ್ರಸಾದ್ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.