ಶಿವಮೊಗ್ಗ ಲೈವ್
ಹೊಳೆಹೊನ್ನೂರು: ಟಗರು ಕಾಳಗ ವೀಕ್ಷಿಸಲು ಬಂದಿದ್ದ ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಸುನೀಲ್ (22) ಎಂಬುವವರಿಗೆ ಚಾಕುವಿನಿಂದ ಇರಿದಿದೆ. ಸಮೀಪದ ಆನವೇರಿಯಲ್ಲಿ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 34 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಆನವೇರಿಯ ಸುನೀಲ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದಿಂದ ಬಂದಿದ್ದ ಯುವಕರು ಟಗರು ಕಾಳಗ ನೋಡಿಕೊಂಡು ಕಾರಿನಲ್ಲಿ ವಾಪಸಾಗುತ್ತಿದ್ದರು. ಈ ವೇಳೆ ಕ್ಷುಲಕ ಕಾರಣಕ್ಕೆ ಸ್ಥಳೀಯ ಯುವಕರು ಮತ್ತು ಶಿವಮೊಗ್ಗದಿಂದ ಬಂದಿದ್ದ ಯುವಕರ ಮಧ್ಯೆ ಗಲಾಟೆಯಾಗಿದೆ.

ಶಿವಮೊಗ್ಗದಿಂದ ಬಂದಿದ್ದ 8-10 ಜನರ ಗುಂಪು, ಟಗರು ಕಾಳಗದ ಸ್ಥಳದ ಬಳಿ ಇರುವ ಟೀ ಅಂಗಡಿಯಲ್ಲಿ ಸುನೀಲ್ ಮೇಲೆ ಹಲ್ಲೆ ಮಾಡಿ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದೆ. ಜಗಳ ಬಿಡಿಸಲು ಬಂದ ಕೆಲವರ ಮೇಲೂ ದಾಳಿ ಮಾಡಿದ್ದು, ನಾಲ್ಕೈದು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.