ಶಿವಮೊಗ್ಗ: ಅಡಿಕೆ ಲೋಡ್ ಮಾಡಿಕೊಂಡು ತೆರಳುತ್ತಿದ್ದ ಟ್ರಾಕ್ಟರ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಟ್ರಾಲಿಯ ಮೇಲಿದ್ದ ಕೂಲಿ ಕಾರ್ಮಿಕ ರಸ್ತೆಗೆ ಬಿದ್ದಿದ್ದಾರೆ. ಘಟನೆಯಲ್ಲಿ ಕಾರ್ಮಿಕನ ಕಾಲಿನ ಮೂಳೆ ಮುರಿದಿದೆ. ಕೊಮ್ಮನಾಳು ಗ್ರಾಮದ ಸಮೀಪ ಘಟನೆ ನಡೆದಿದೆ. (ಈ ಸುದ್ದಿಯನ್ನು ಇನ್ನು 42 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಭದ್ರಾವತಿ ತಾಲ್ಲೂಕಿನ ಸಿದ್ಲಿಪುರದ ರಘು ಅವರ ಕಾಲಿನ ಮೂಳೆ ಮುರಿದಿದೆ. ಶಿಕಾರಿಪುರ ತಾಲ್ಲೂಕಿನ ಬಳೂರು ಗ್ರಾಮದಲ್ಲಿ ಹಸಿ ಅಡಿಕೆ ಖೇಣಿ ಕೆಲಸ ಮುಗಿಸಿ, ಅಡಿಕೆಯನ್ನು ಟ್ರಾಕ್ಟರ್ನಲ್ಲಿ ಲೋಡ್ ಮಾಡಿಕೊಂಡು ಸನ್ಯಾಸಿಕೊಡಮಗ್ಗಿ ಗ್ರಾಮದ ಕಡೆಗೆ ತೆರಳುತ್ತಿದ್ದರು. ರಘು ಹಾಗೂ ಮತ್ತೊಬ್ಬ ಕಾರ್ಮಿಕ ಹರೀಶ್ ಟ್ರಾಲಿಯಲ್ಲಿದ್ದ ಅಡಿಕೆ ಲೋಡ್ನ ಮೇಲೆ ಕುಳಿತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೊಮ್ಮನಾಳು ಗ್ರಾಮ ದಾಟಿ ಸೋಮಿನಕೊಪ್ಪ ರಸ್ತೆಯಲ್ಲಿ ಚಲಿಸುವಾಗ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರು. ಈ ವೇಳೆ ಟ್ರಾಲಿ ಮೇಲಿದ್ದ ರಘು ಆಯಾತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಘಟನೆಯಲ್ಲಿ ರಘು ಬಲಗಾಲಿನ ಮೂಳೆ ಮುರಿದಿದೆ. ತಲೆ, ಕೈಗೆ ಗಾಯವಾಗಿದೆ. ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.