ಹಾಲಿನ ದರ ಹೆಚ್ಚಳಕ್ಕೆ ಸ್ವಾಗತ, ರೈತರ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯ

ಶಿವಮೊಗ್ಗ: ಹಾಲು ಉತ್ಪಾದಕ ರೈತರ ಹಿತದೃಷ್ಟಿಯಿಂದ ಪ್ರತಿ ಲೀಟರ್ ಹಾಲಿನ ದರ ₹8 ಹೆಚ್ಚಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ರೈತರ ಇತರ ಬೇಡಿಕೆಗಳನ್ನೂ ಈಡೇರಿಸಬೇಕು ಎಂದು ಹಾಲು ಉತ್ಪಾದಕರ ಹಿತರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಜಿ. ಕರಕುಚ್ಚಿ ಆಗ್ರಹಿಸಿದರು. (ಈ ಸುದ್ದಿಯನ್ನು ಇನ್ನು 76 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 7ರಂದು ಹಾಲಿನ ದರ ಹೆಚ್ಚಳ ಹಾಗೂ ಪ್ರೋತ್ಸಾಹ ಧನವನ್ನು ₹5ರಿಂದ ₹10ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿ ಸುಮಾರು 1,000 ರೈತರು ಪಾದಯಾತ್ರೆ ನಡೆಸಿ ಪ್ರತಿಭಟಿಸಿದ್ದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿಯೂ ಹೋರಾಟ ನಡೆಸಲಾಗಿತ್ತು. ರೈತರ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ ಪ್ರತಿ ಲೀಟರ್‌ಗೆ ₹8 ಹೆಚ್ಚಿಸಿದ್ದು, ಇದರಲ್ಲಿ ₹7 ರೈತರಿಗೆ ಹಾಗೂ ₹1 ಹಾಲು ಒಕ್ಕೂಟಕ್ಕೆ ನೀಡಲು ನಿರ್ಧರಿಸಿದೆ ಎಂದರು.

Milk-Producers-Forum-press-meet-in-Shivamogga

ಕೇಂದ್ರ ಸರ್ಕಾರವೂ ಹಾಲು ಉತ್ಪಾದಕರಿಗೆ ₹5 ಪ್ರೋತ್ಸಾಹ ಧನ ನೀಡಬೇಕು. ರೈತರಿಗೆ ₹10 ಲಕ್ಷ ವಿಮೆ, ಕೃಷಿ ಮತ್ತು ಹೈನುಗಾರಿಕೆ ಸಾಲ ಮನ್ನಾ ಹಾಗೂ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯ ವಿಸ್ತರಿಸಬೇಕು. ಮೇ ತಿಂಗಳವರೆಗೆ ಮಾತ್ರ ಪ್ರೋತ್ಸಾಹ ಧನದ ಸಬ್ಸಿಡಿ ಬಿಡುಗಡೆಯಾಗಿದ್ದು, ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ರೈತರು ಹಲವು ಸಂಕಷ್ಟಗಳ ನಡುವೆಯೂ ಹಾಲು ಉತ್ಪಾದನೆಯಲ್ಲಿ ತೊಡಗಿದ್ದಾರೆ. ಗ್ರಾಹಕರು ಮತ್ತು ಉತ್ಪಾದಕರು ನಾಣ್ಯದ ಎರಡು ಮುಖಗಳಿದ್ದಂತೆ. ಇಬ್ಬರ ಹಿತ ಕಾಪಾಡುವ ಜವಾಬ್ದಾರಿ ಸರ್ಕಾರದ್ದಾಗಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರೂ ರೈತಪರ ಯೋಜನೆಗಳ ಮೂಲಕ ಗಮನ ಸೆಳೆದಿದ್ದರು ಎಂದು ತಿಳಿಸಿದರು.

ಹಲವು ವರ್ಷಗಳ ಬೇಡಿಕೆಯ ಬಳಿಕ ಹಾಲಿನ ದರ ಹೆಚ್ಚಿಸಿ ರೈತರಿಗೆ ಅನುಕೂಲ ಕಲ್ಪಿಸಿರುವ ಸರ್ಕಾರ ಹಾಗೂ ಇದಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ.

– ಜಯರಾಮ್ ಗೋಂದಿ, ಜಿಲ್ಲಾ ಗೌರವ ಅಧ್ಯಕ್ಷ

ಜಿಲ್ಲಾ ಉಪಾಧ್ಯಕ್ಷ ತಿಮ್ಲಾಪುರ ಲೋಕೇಶ್, ಪ್ರಧಾನ ಕಾರ್ಯದರ್ಶಿ ಗಜೇಂದ್ರ, ಭಾಗ್ಯ, ರಾಮಚಂದ್ರ, ವೆಂಕಟೇಶ್, ಮಂಜುನಾಥ, ದಾನಪ್ಪ, ರಾಜು, ದಾದಾಫೀರ್, ಪ್ರಭು, ಅರುಣ್ ಕುಮಾರ್ ಇದ್ದರು.

Editor JOIN OUR WHATSAPP GROUP