ಸಾಮಾಜಿಕ ಜಾಲತಾಣ ಬಳಸಿ ಯಶಸ್ವಿ ಆಗೋದು ಹೇಗೆ? ಶಿವಮೊಗ್ಗ ಎಸ್‌ಪಿ ಹೇಳಿಕೆಯ ಪಾಯಿಂಟ್ಸ್‌

ಸಾಮಾಜಿಕ ಜಾಲತಾಣ ಬಳಸಿ ಯಶಸ್ವಿ ಆಗೋದು ಹೇಗೆ? ಶಿವಮೊಗ್ಗ ಎಸ್‌ಪಿ ಹೇಳಿಕೆಯ ಪಾಯಿಂಟ್ಸ್‌ (ಈ ಸುದ್ದಿಯನ್ನು ಇನ್ನು 95 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಂಕರಘಟ್ಟ: ಸಾಮಾಜಿಕ ಮಾಧ್ಯಮ ಮೂಲದ ಅನೈತಿಕ ಚಟುವಟಿಕೆಗಳು ಸಮಾಜದಲ್ಲಿ ಹೆಚ್ಚಾಗುತ್ತಿದೆ. ಆದ್ದರಿಂದ ಯುವಪೀಳಿಗೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮತ್ತು ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವುದು ಭವಿಷ್ಯದ ಹಿತದೃಷ್ಟಿಯಿಂದ ಅತ್ಯಂತ ಮುಖ್ಯ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Shimoga-SP-B-Nikhil-at-kuvempu-university

ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿವಿಯ 40ನೇ ಸಂಸ್ಥಾಪನಾ ದಿನ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್‌

POINT-1

ಇನ್‌ಸ್ಟಾಗ್ರಾಂ, ಎಕ್ಸ್, ವಾಟ್ಸ್ಯಾಪ್ ನಂತಹ ಸಾಮಾಜಿಕ ವೇದಿಕೆಗಳಲ್ಲಿ ನಮ್ಮ ಗುರುತು ಮರೆಮಾಚಿ ಅಥವಾ ತಮಗೆ ಅರಿವಿಲ್ಲದಂತೆಯೇ ಮಾಡುವ ಯಾವುದೇ ಕಾನೂನು ಬಾಹಿರ ಪೋಸ್ಟ್ ಗಳು, ಕಾಮೆಂಟ್‌ಗಳು ವಿದ್ಯಾರ್ಥಿಗಳ ಮುಂದಿನ ವೃತ್ತಿಜೀವನಕ್ಕೆ ಮತ್ತು ಭವಿಷ್ಯಕ್ಕೆ  ಮಾರಕವಾಗಲಿದೆ. ಒಂದು ಬಾರಿ ಲಾಗಿನ್ ಆಗಿ ಡಿಜಿಟಲ್ ಮಾಧ್ಯಮ ಬಳಸಿದರೆ ಸಾಕು. ನಿಮ್ಮ ಡಿಜಿಟಲ್ ಹೆಜ್ಜೆ ಗುರುತುಗಳನ್ನು ಅಳಿಸಿ ಹಾಕಲಾಗುವುದಿಲ್ಲ. ಹೀಗಾಗಿ, ಇಂತಹಾ ಚಟುವಟಿಕೆಗಳಿಂದ ದೂರವಿರಿ.

POINT-2

ಇನ್ನು ಕೃತಕ ಬುದ್ಧಿಮತ್ತೆ ಎಲ್ಲ ರಂಗಗಳನ್ನು ಆವರಿಸಿಕೊಳ್ಳುತ್ತಿದ್ದು ಇದಕ್ಕೆ ಶೈಕ್ಷಣಿಕ ಕ್ಷೇತ್ರ ಕೂಡ ಹೊರತಲ್ಲ. ಜೆಮಿನಿ, ಚಾಟ್ ಜಿಪಿಟಿ, ಕ್ಲಾಡ್ ನಂತಹ ಎಐ ಸಾಧನಗಳು ವಿದ್ಯಾರ್ಥಿಗಳ ಓದಿಗೆ ಪೂರಕವಾಗಿ ಬಳಕೆಯಾಗಬೇಕೇ ವಿನಃ, ಇವುಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾದರೆ ಮುಂದೆ ಸರ್ಕಾರಿ ಹಾಗೂ ಕಾರ್ಪೊರೆಟ್ ಕ್ಷೇತ್ರದ ಉದ್ಯೋಗಗಳಿಗೆ ಆಯ್ಕೆಯ ವೇಳೆ ನಿರಾಶೆಯಾಗುವುದು ಖಂಡಿತ.

POINT-3

ಉನ್ನತ ಶಿಕ್ಷಣ ಪಡೆದ ಇಂದಿನ ಯುವ ಜನಾಂಗ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವುದೇ ದೊಡ್ಡ ಸಾಧನೆಯ ಸಂಕೇತ ಎಂದು ಆಲೋಚಿಸುವುದು ಸಹಜ. ಆದರೆ, ಇಂತಹ ಹುದ್ದೆಗಳು ದೊರಕದವರು ನಿರಾಶರಾಗಬೇಕಿಲ್ಲ. ಯಾವುದೇ ಉದ್ಯೋಗ ಆಯ್ದುಕೊಂಡರೂ ಅದನ್ನು ಶ್ರದ್ಧೆಯಿಂದ ನಿರ್ವಹಿಸುವುದೇ ನಿಜವಾದ ಸಾಧನೆ.

​ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕ್ರಿಯಾಶೀಲರಾಗಿರಬೇಕು. ಮುಂಬರುವ ದಿನಗಳಲ್ಲಿ ವಿಶಿಷ್ಟ ಕಲಿಕಾ ವಿಚಾರಗಳು ಮತ್ತು ಅನುಭವಗಳಿಗೆ ವಿಶ್ವವಿದ್ಯಾಲಯವು ಹೆಚ್ಚಿನ ಅವಕಾಶಗಳನ್ನು ಒದಗಿಸಿಕೊಡಲಿದೆ.

– ಪ್ರೊ. ಶರತ್ ಅನಂತಮೂರ್ತಿ, ಕುವೆಂಪು ವಿವಿ ಕುಲಪತಿ

ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ, ವಿದ್ಯಾರ್ಥಿ ಕ್ಷೇಮಪಾಲನಾ ಡೀನ್ ಪ್ರೊ. ಜಿ. ಪ್ರಶಾಂತ್ ನಾಯಕ್, ಡೀನ್‌ಗಳಾದ ಪ್ರೊ. ಎಸ್. ಕೆ. ನರಸಿಂಹಮೂರ್ತಿ, ಪ್ರೊ. ಗಜಾನನ ಪ್ರಭು, ಪಠ್ಯೇತರ ಚಟುವಟಿಕೆ ವಿಭಾಗದ ಸಂಚಾಲಕ ಡಾ. ತಳವಾರ ವೆಂಕಟೇಶ್, ವಿವಿಧ ವಿಭಾಗಗಳ ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.