ಶಿವಮೊಗ್ಗ: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2026-27ನೇ ಸಾಲಿನ ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಅರ್ಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. (ಈ ಸುದ್ದಿಯನ್ನು ಇನ್ನು 48 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಸಿಇಟಿ, ನೀಟ್, ಪಿಜಿಸಿಇಟಿ, ಪಿಜಿನೀಟ್ ಹಾಗೂ ಡಿಸಿಇಟಿ ಮುಖಾಂತರ ಎಂಬಿಬಿಎಸ್, ಬಿಡಿಎಸ್, ಬಿ.ಇ, ಬಿ.ಟೆಕ್, ಬಿ-ಆಯುಷ್, ಬಿ.ಆರ್ಚ್, ಕೃಷಿ ವಿಜ್ಞಾನ, ವೆಟರ್ನರಿ ಮತ್ತು ಫಾರ್ಮಾ ಸೈನ್ಸ್ ಕೋರ್ಸ್ಗಳಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ವಿದ್ಯಾರ್ಥಿಗಳು ನಿಗಮದಿಂದ ಹಿಂದೆ ಪಡೆದ ಸಾಲದ ಶೇ.12 ರಷ್ಟು ಹಣವನ್ನು ಆನ್ಲೈನ್ ಮೂಲಕ ಪಾವತಿಸಿ ನವೀಕರಣ ಸಾಲ ಪಡೆಯಬಹುದಾಗಿದೆ.

ಈ ಹಿಂದೆ ಅರಿವು ಸಾಲ ಪಡೆಯದ, ವಿವಿಧ ವರ್ಷಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕೆಇಎ ಮೂಲಕ ಆಯ್ಕೆಯಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು (ಕ್ರಿಶ್ಚಿಯನ್ ಸಮುದಾಯ ಹೊರತುಪಡಿಸಿ) ಆನ್ಲೈನ್ ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಬಹುದು. ಇವರಿಗೆ ನವೀಕರಣ ಮೊತ್ತ ಪಾವತಿ ಅನ್ವಯಿಸುವುದಿಲ್ಲ. ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ kmdconline.karnataka.gov.in ಮೂಲಕ ಅರ್ಜಿ ಭರ್ತಿ ಮಾಡಿ, ಮೂಲ ಇಂಡೆಮ್ನಿಟಿ ಬಾಂಡ್ ಹಾಗೂ ಅಗತ್ಯ ದಾಖಲೆಗಳನ್ನು ನವೆಂಬರ್ 15 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-228262 ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.