ಶಿವಮೊಗ್ಗ: ಹಾಲಿನ ದರ ಏರಿಕೆ ಖಂಡಿಸಿ ಶಿವಮೊಗ್ಗದಲ್ಲಿ ರಾಷ್ಟ್ರಭಕ್ತರ ಬಳಗದ ಮಹಿಳಾ ಘಟಕದಿಂದ ಮೆರವಣಿಗೆ ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಗರದ ಗೋಪಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು. (ಈ ಸುದ್ದಿಯನ್ನು ಇನ್ನು 68 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಹಾಲಿನ ದರ ಏರಿಕೆಯಿಂದ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸರ್ಕಾರ ಕೂಡಲೇ ಏರಿಕೆ ಮಾಡಿರುವ ಹಾಲಿನ ದರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಬೆಲೆ ಏರಿಕೆ ನೀತಿಯನ್ನು ಖಂಡಿಸಲಾಯಿತು.

ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ‘ಸರ್ಕಾರ ಹಾಲು, ಮೊಸರು, ತುಪ್ಪ ಸೇರಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದೆ. ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಬಸ್ ದರ ಏರಿಕೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದ ಬಳಿ ಹಣವಿಲ್ಲ ಎಂಬ ಹೇಳಿಕೆಗಳು ಆಡಳಿತ ನಡೆಸುವ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮೂಡಿಸುತ್ತವೆ. ಸರ್ಕಾರ ತನ್ನ ಯೋಜನೆಗಳ ಬಗ್ಗೆ ವಿಶ್ವಾಸ ಹೊಂದಿದ್ದರೆ, ಜನರ ಮುಂದೆ ಹೋಗಿ ಚುನಾವಣೆಯನ್ನು ಎದುರಿಸಲಿ. ಜನರು ಯೋಜನೆಗಳನ್ನು ಮೆಚ್ಚಿದ್ದರೆ ಮತ್ತೆ ಅಧಿಕಾರಕ್ಕೆ ಬರಬಹುದು. ಆದರೆ ಜನರು ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದರೆ ಅದನ್ನೂ ಒಪ್ಪಿಕೊಳ್ಳಬೇಕು’ ಎಂದರು.
ಸರ್ಕಾರ ಕೂಡಲೇ ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಇಳಿಸಬೇಕು. ಜನರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹಾಕುವುದನ್ನು ನಿಲ್ಲಿಸಬೇಕು. ಸಾರ್ವಜನಿಕರ ಪ್ರತಿಭಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜನರ ಅಸಮಾಧಾನವನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಇ.ಕಾಂತೇಶ್, ಮಾಜಿ ಮೇಯರ್ಗಳಾದ ಸುವರ್ಣಾ ಶಂಕರ್, ಲಕ್ಷ್ಮೀ ಶಂಕರ್ ನಾಯ್ಕ, ಲತಾ ಗಣೇಶ್, ಪ್ರಮುಖರಾದ ಕೆಂಪಮ್ಮ, ಸೀತಾಲಕ್ಷ್ಮೀ, ಅನಿತಾ, ಆರತಿ ಪ್ರಕಾಶ್, ಇ.ವಿಶ್ವಾಸ್, ಮೋಹನ್ ಜಾಧವ್ ಇತರರಿದ್ದರು.