ಶಿವಮೊಗ್ಗ: ಕೊಲೆ ಯತ್ನ, ಸುಲಿಗೆ, ಗಾಂಜಾ ಮಾರಾಟ ಸೇರಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂ.ಎಸ್. ಸಚಿನ್ ಅಲಿಯಾಸ್ ಶ್ಯಾಡೋ ಎಂಬಾತನ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. (ಈ ಸುದ್ದಿಯನ್ನು ಇನ್ನು 58 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಆರೋಪಿ ವಿರುದ್ಧ ಶಿವಮೊಗ್ಗ ಗ್ರಾಮಾಂತರ, ಜಯನಗರ, ದೊಡ್ಡಪೇಟೆ, ಕೋಟೆ, ವಿನೋಬನಗರ ಹಾಗೂ ಆನಂದಪುರ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ಸುಲಿಗೆ, ದೊಂಬಿ, ಜೀವ ಬೆದರಿಕೆ, ಗಾಂಜಾ ಮಾರಾಟ ಹಾಗೂ ಸಾರ್ವಜನಿಕ ಆಸ್ತಿ ಹಾನಿ ಸೇರಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ.

ಆರೋಪಿ ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡು ಸಮಾಜದ ಶಾಂತಿ ಮತ್ತು ಸ್ವಾಸ್ಥ್ಯ ಕೆಡಿಸುತ್ತಿದ್ದ. ಸಾಮಾನ್ಯ ಕಾಯ್ದೆಗಳಿಂದ ಈತನನ್ನು ನಿಗ್ರಹಿಸಲು ಸಾಧ್ಯವಾಗದ ಹಿನ್ನೆಲೆ ವಿವಿಧ ಕಾಯ್ದೆಗಳ ಅಡಿ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿತ್ತು. ಅಕ್ರಮ ಭಟ್ಟಿ ಸಾರಾಯಿ ವ್ಯವಹಾರ ಔಷಧಾಪರಾಧ, ಜೂಜುಕೋರ, ಗೂಂಡಾ, ಅನೈತಿಕ ಅಪರಾಧ ಮತ್ತು ಕೊಳಚೆ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವ ಮತ್ತು ವಿಡಿಯೋ ಅಥವಾ ಅಡಿಯೋ ಪೈರಸಿ ಚಟುವಟಿಕೆಗಳ ತಡೆ ಅಧಿನಿಯಮದ ಪ್ರಕಾರ ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ತಿಳಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೊಲೀಸರ ವರದಿ ಆಧರಿಸಿ ಜಿಲ್ಲಾಧಿಕಾರಿ ನವೆಂಬರ್ 6 ರಂದು ಆರೋಪಿಯನ್ನು ಬಂಧನದಲ್ಲಿರಿಸಲು ಆದೇಶಿಸಿದ್ದರು. ಅದರಂತೆ ನವೆಂಬರ್ 7 ರಂದು ಸಚಿನ್ ಅಲಿಯಾಸ್ ಶ್ಯಾಡೋ ಸಚಿನ್ನನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.