ಶಿವಮೊಗ್ಗ: ಇಲ್ಲಿನ ಬಸವಕೇಂದ್ರ ವತಿಯಿಂದ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮವು ನ.13ರಿಂದ ಡಿ.13ರವರೆಗೆ ನಗರದ ವಿವಿಧೆಡೆ ನಡೆಯಲಿದೆ ಎಂದು ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ತಿಳಿಸಿದರು. (ಈ ಸುದ್ದಿಯನ್ನು ಇನ್ನು 79 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಕೇಂದ್ರಕ್ಕೆ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಚರಮೂರ್ತಿಗಳಾಗಿ ಆಗಮಿಸಿ 20 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಈ ಬಾರಿಯ ಚಿಂತನ ಕಾರ್ತಿಕವನ್ನು ವಿಶೇಷವಾಗಿ ಆಯೋಜಿಸಲಾಗಿದೆ ಎಂದರು.

ನ.13ರಂದು ಸಂಜೆ 6.30ಕ್ಕೆ ವೆಂಕಟೇಶನಗರದ ಬಸವಕೇಂದ್ರದಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ.ವಿ. ಧನಂಜಯ ಉದ್ಘಾಟಿಸಲಿದ್ದಾರೆ. ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ರಾಂತ ಕುಲಸಚಿವ ಡಾ. ಕೆ.ಸಿ. ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಿ. ಮಧುಸೂಧನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಜಿ. ಶಶಿಧರ್, ಕಾರ್ಯಾಧ್ಯಕ್ಷ ಎಂ.ಆರ್. ಜಯದೇವಪ್ಪ ಉಪಸ್ಥಿತರಿರಲಿದ್ದಾರೆ. ಸಂಘ ಹಾಗೂ ಬಸವಕೇಂದ್ರದ ಸಂಯುಕ್ತಾಶ್ರಯದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಒಂದೊಂದು ಮನೆಯಲ್ಲಿ ಶಿವಾನುಭವ ಚಿಂತನೆ
ಬಸವಾದಿ ಶರಣರ ವಿಚಾರಧಾರೆಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ 2006ರಲ್ಲಿ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಚಿಂತನ ಕಾರ್ತಿಕ ಆರಂಭಿಸಿದರು. ಕಾರ್ತಿಕ ಮಾಸದಲ್ಲಿ ಪ್ರತಿದಿನ ಒಂದೊಂದು ಮನೆಯಲ್ಲಿ ಶಿವಾನುಭವ ಚಿಂತನೆ, ಭಜನೆ ಹಾಗೂ ದಾಸೋಹ ನಡೆಸಲಾಗುತ್ತಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಆನ್ಲೈನ್ ಮೂಲಕ ಕಾರ್ಯಕ್ರಮ ಮುಂದುವರಿಸಲಾಗಿತ್ತು. ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಿಗೂ ಕಾರ್ಯಕ್ರಮ ವಿಸ್ತರಿಸಿದೆ ಎಂದು ಬೆನಕಪ್ಪ ವಿವರಿಸಿದರು.
ಈ ಬಾರಿಯ ಚಿಂತನ ಕಾರ್ತಿಕವನ್ನು ಬಸವಣ್ಣನವರ ವ್ಯಕ್ತಿತ್ವ ಹಾಗೂ ವಿಚಾರಧಾರೆಗಳ ಚಿಂತನೆಗೆ ಒತ್ತು ನೀಡುವಂತೆ ರೂಪಿಸಲಾಗಿದೆ. ಡಿ.12ರಂದು ಸಮಾರೋಪ ಸಮಾರಂಭ ಹಾಗೂ ಡಿ.13ರಂದು ಗಣಪರ್ವ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಸವಕೇಂದ್ರದ ಉಪಾಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ ತಲಗಿಹಾಳ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಲವಕುಮಾರ್, ರುದ್ರಮುನಿ ಸಜ್ಜನ್, ಪ್ರಕಾಶ್, ಮಮತಾ, ಶಶಿಕಲಾ ಚಂದ್ರಪ್ಪ, ಗಾಯತ್ರಿ ಪಾಟೀಲ್, ನಿರಂಜನ ಸ್ವಾಮಿ ಉಪಸ್ಥಿತರಿದ್ದರು.