ಶಿವಮೊಗ್ಗ: ಅಪಾರ್ಟ್ಮೆಂಟ್ ಫ್ಲಾಟ್ ನಿರ್ಮಿಸಿಕೊಡದ ಕಾರಣ ಒಪ್ಪಂದವನ್ನು ರದ್ದುಪಡಿಸಿ, ದೂರುದಾರರಿಂದ ಪಡೆದ ಮುಂಗಡ ಹಣವನ್ನು ಶೇಕಡ 9 ರಷ್ಟು ಬಡ್ಡಿ ಹಾಗೂ ಪರಿಹಾರದೊಂದಿಗೆ ಮರುಪಾವತಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ರಿಯಲ್ ಎಸ್ಟೇಟ್ ಸಂಸ್ಥೆಗೆ ಆದೇಶಿಸಿದೆ. (ಈ ಸುದ್ದಿಯನ್ನು ಇನ್ನು 59 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಸಾಗರ ತಾಲ್ಲೂಕಿನ ಕೆರೋಡಿ ಗ್ರಾಮದ ನಮಿತಾ ಕೆ. ಅವರು ಬೆಂಗಳೂರಿನ ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ನಿರ್ದೇಶಕರ ವಿರುದ್ಧ ಆಯೋಗಕ್ಕೆ ದೂರು ನೀಡಿದ್ದರು.

ಫ್ಲಾಟ್ಗಾಗಿ ಸಂಸ್ಥೆ ಜೊತೆ ಒಪ್ಪಂದ
ದೂರುದಾರರು ಪತಿಯ ವಾಸಕ್ಕಾಗಿ ಬೆಂಗಳೂರಿನಲ್ಲಿ ಫ್ಲಾಟ್ ಖರೀದಿಸಲು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ₹9.20 ಲಕ್ಷ ಮುಂಗಡ ಪಾವತಿಸಿದ್ದರು. ಆದರೆ ರಿಯಲ್ ಎಸ್ಟೇಟ್ ಸಂಸ್ಥೆಯುವರು ತಾಂತ್ರಿಕ ಕಾರಣ ನೀಡಿ ಫ್ಲಾಟ್ ನಿರ್ಮಿಸಿಕೊಡದೆ ಕಾಲಹರಣ ಮಾಡಿದ್ದರು.
ಈ ನಡುವೆ ದೂರುದಾರರ ಪತಿ ಅನಾರೋಗ್ಯದಿಂದ ನಿಧನರಾಗಿದ್ದರಿಂದ, ಒಪ್ಪಂದ ರದ್ದುಪಡಿಸಿ ಮುಂಗಡ ಹಣ ವಾಪಸ್ ನೀಡುವಂತೆ ಕೋರಿದ್ದರು. ಆದರೆ ರಿಯಲ್ ಎಸ್ಟೇಟ್ ಸಂಸ್ಥೆಯುವರು ಹಣ ಹಿಂದಿರುಗಿಸದೆ ವಂಚಿಸಿದ್ದರು. ಲೀಗಲ್ ನೋಟೀಸ್ಗೂ ಸ್ಪಂದಿಸಿರಲಿಲ್ಲ.
ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠವು, ಸಂಸ್ಥೆಯು ಸೇವೆಯಲ್ಲಿ ನ್ಯೂನ್ಯತೆ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿದೆ. ನಮಿತಾ ಅವರಿಗೆ ₹9.01 ಲಕ್ಷ ಹಣವನ್ನು ವಾರ್ಷಿಕ ಶೇ 9 ರಷ್ಟು ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ಮರಳಿಸಬೇಕು. ತಪ್ಪಿದ್ದಲ್ಲಿ ಶೇ.12 ರಷ್ಟು ಬಡ್ಡಿ ಪಾವತಿಸಬೇಕು. ಜೊತೆಗೆ ಮಾನಸಿಕ ಕಿರುಕುಳ ಹಾಗೂ ದೂರಿನ ವೆಚ್ಚಕ್ಕಾಗಿ ಒಟ್ಟು ₹35,000 ಪರಿಹಾರ ನೀಡಬೇಕು ಎಂದು ಸಂಸ್ಥೆಗೆ ಆದೇಶಿಸಿದೆ.