ಶಿವಮೊಗ್ಗ: ಭದ್ರಾ ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳಿಗೆ ಕನಿಷ್ಠ 20 ದಿನ ನೀರು ಹರಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಹರಿಸುತ್ತಿರುವ ನೀರನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ರೈತ ಸಂಘದ ಅಧ್ಯಕ್ಷೀಯ ಮಂಡಳಿ ಸದಸ್ಯ ಕೆ.ಟಿ. ಗಂಗಾಧರ್ ಒತ್ತಾಯಿಸಿದರು. (ಈ ಸುದ್ದಿಯನ್ನು ಇನ್ನು 98 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.16ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಅಚ್ಚುಕಟ್ಟು ಪ್ರದೇಶದ ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.

ಮಳೆ ಕೊರತೆಯಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರವೇ ರಾಜ್ಯದ 30 ಜಿಲ್ಲೆಗಳ 226 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಕುಡಿಯುವ ನೀರಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದರಿಂದ ರೈತರು ಮುಂಗಾರು ಭತ್ತದ ಬೆಳೆ ಕೈಬಿಟ್ಟು, ಬೇಸಿಗೆ ಬೆಳೆಗೆ ನೀರು ಕಾಯ್ದಿರಿಸಿದ್ದಾರೆ ಎಂದು ತಿಳಿಸಿದರು.
ಅಚ್ಚುಕಟ್ಟು ಭಾಗ ರೈತರಿಗೆ ಅನ್ಯಾಯ
ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸಿದ ಬಳಿಕ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ಮೂರು ಟಿಎಂಸಿ ನೀರು ಹರಿಸಲಾಗಿದೆ. ಅಲ್ಲದೆ, ನಾಲೆಗಳ ಕೊನೆಯ ಭಾಗದ ಕೆರೆಗಳಿಗೆ ಹೆಚ್ಚುವರಿಯಾಗಿ ಒಂದು ಟಿಎಂಸಿ ನೀರು ಹರಿಸಲಾಗುತ್ತಿದೆ. ಇದರಿಂದ ಅಚ್ಚುಕಟ್ಟುದಾರರಿಗೆ ಅನ್ಯಾಯವಾಗುತ್ತಿದೆ. ತಕ್ಷಣ ಮೇಲ್ದಂಡೆ ಯೋಜನೆಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಕೆ.ಟಿ.ಗಂಗಾಧರ್ ಆಗ್ರಹಿಸಿದರು.
ಜಲಾಶಯದಲ್ಲಿ ಪ್ರಸ್ತುತ 55.84 ಟಿಎಂಸಿ ನೀರಿದ್ದು, 13.83 ಟಿಎಂಸಿ ಡೆಡ್ ಸ್ಟೋರೇಜ್ ಹೊರತುಪಡಿಸಿದರೆ ಬಳಕೆಗೆ 42 ಟಿಎಂಸಿ ಮಾತ್ರ ಲಭ್ಯವಿದೆ. ಬೇಸಿಗೆ ಹಂಗಾಮಿನ ಭತ್ತದ ಬೆಳೆಗೆ ಎಡ ಮತ್ತು ಬಲದಂಡೆ ನಾಲೆಗಳ ವ್ಯಾಪ್ತಿಯಲ್ಲಿ 36 ಟಿಎಂಸಿ ನೀರು ಅಗತ್ಯವಿದೆ. 120 ದಿನ ನೀರು ಹರಿಸಲು ಏಳು ಟಿಎಂಸಿ ಕೊರತೆಯಿದೆ. ಇಂತಹ ಸಂದರ್ಭದಲ್ಲಿ ಮೇಲ್ದಂಡೆಗೆ ನೀರು ಹರಿಸುವುದು ಸರಿಯಲ್ಲ ಎಂದರು.
ಅಕ್ಟೋಬರ್ 30ರಿಂದ ಮೇಲ್ದಂಡೆ ಯೋಜನೆಯ ಹೆಚ್.ಆರ್.ಪಿ.ಗೆ ಒಂದು ಟಿಎಂಸಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಅಹೋರಾತ್ರಿ ಧರಣಿ ನಡೆಸಿದರೂ ಸರ್ಕಾರ ನಿರ್ಧಾರ ಬದಲಿಸಿಲ್ಲ ಎಂದು ದೂರಿದರು.
ಮೇಲ್ದಂಡೆ ಯೋಜನೆ ಶೀಘ್ರ ಮುಗಿಸಿ
ತುಂಗಾ ಮೇಲ್ದಂಡೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ಭದ್ರಾ ಜಲಾಶಯಕ್ಕೆ ನೀರು ಹರಿಸಬೇಕು. ಅಡಿಕೆ, ತೆಂಗು, ಬಾಳೆ ಸೇರಿದಂತೆ ಇತರೆ ಬೆಳೆಗಳು, ಜಾನುವಾರುಗಳು ಹಾಗೂ ಕೆರೆ-ಕುಂಟೆಗಳಿಗಾಗಿ ನವೆಂಬರ್ನಲ್ಲಿ 20 ದಿನ ನೀರು ಹರಿಸಬೇಕು. ನೀರಾವರಿ ಸಲಹಾ ಸಮಿತಿಯನ್ನು ರದ್ದುಪಡಿಸಿ, ನಾಲೆಗಳಿಗೆ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ಭತ್ತದ ಬೆಳೆಗೆ ಲಾಭದಾಯಕ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವೀರೇಶ್, ಲವಕುಮಾರ್, ಯಶವಂತರಾವ್ ಘೋರ್ಪಡೆ, ಮಂಜಪ್ಪಗೌಡ್ರು, ಮಂಜುನಾಥೇಶ್ವರ ಹೆಚ್.ಎಸ್., ಮೋಹನ್ ಕೂಡ್ಲಿಗೆರೆ, ಹಿರಣ್ಣಯ್ಯ, ಜಗದೀಶ್, ರಘುನಾಥ್ ಇದ್ದರು.