ಸಾಗರ: ಶರಾವತಿ ಹಿನ್ನೀರು ಭಾಗದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಪ್ರಶ್ನಿಸಿದ ಯುವಕನಿಗೆ ವ್ಯಕ್ತಿಯೊಬ್ಬ ಫೋನ್ ಮಾಡಿ ಜೀವಬೆದರಿಕೆ ಹಾಕಿದ್ದಾನೆ. ತಾಲ್ಲೂಕಿನ ಹೆಗ್ಗಟ್ಟು ಗ್ರಾಮದಲ್ಲಿ ಘಟನೆ ನಡೆದಿದೆ. (ಈ ಸುದ್ದಿಯನ್ನು ಇನ್ನು 37 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಗ್ರಾಮದ ರೈತ ವೀರೇಂದ್ರ ಎಂಬುವವರಿಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ. ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶರಾವತಿ ಹಿನ್ನೀರಿನಿಂದ ಅಕ್ರಮವಾಗಿ ಮರಳು ಎತ್ತಿ ವಾಹನಗಳಲ್ಲಿ ಸಾಗಣೆ ಮಾಡಲಾಗುತ್ತಿದೆ. ಇದರಿಂದ ಗ್ರಾಮದ ರಸ್ತೆಗಳು ಹಾಳಾಗುತ್ತಿದ್ದುದರಿಂದ ವೀರೇಂದ್ರ ಅವರು ಗ್ರಾಮದಲ್ಲಿ ಈ ಕುರಿತು ತಿಳಿಸಿದ್ದರು.

ಇದರಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬ ನವೆಂಬರ್ 6 ಹಾಗೂ 7 ರಂದು ವೀರೇಂದ್ರ ಅವರ ಮೊಬೈಲ್‌ಗೆ ಕರೆ ಮಾಡಿ ಮತ್ತು ಮೆಸೇಜ್ ಕಳುಹಿಸಿ ವೀರೇಂದ್ರ ಹಾಗೂ ಅವರ ಅಕ್ಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ನ್ಯಾಯಾಲಯದ ಅನುಮತಿ ಪಡೆದು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.