ಶಿವಮೊಗ್ಗ: ನಗರದಲ್ಲಿ ಭಾನುವಾರ ನಡೆದ ಕೆಎಎಸ್ (ಕೆಪಿಎಸ್‌ಸಿ) ಪೂರ್ವಭಾವಿ ಪರೀಕ್ಷೆಗೆ ಹಾಜರಾಗಲು ಆಗಮಿಸುತ್ತಿದ್ದ ಯುವತಿಯೊಬ್ಬರು, ನಿದ್ದೆಗಣ್ಣಿನಲ್ಲಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಹಾರಿ ಗಾಯಗೊಂಡಿದ್ದಾರೆ. ಆಕೆಯನ್ನು ‘ಅಕ್ಕ ಪಡೆ’ ಹಾಗೂ ರೈಲ್ವೆ ಪೊಲೀಸರು ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. ಶನಿವಾರ ರಾತ್ರಿ ಘಟನೆ ನಡೆದಿದೆ. (ಈ ಸುದ್ದಿಯನ್ನು ಇನ್ನು 58 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಪರೀಕ್ಷೆ ಬರೆಯುವ ಸಲುವಾಗಿ ಶಿವಮೊಗ್ಗಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ, ಆಯಾಸದಿಂದ ಗಾಢ ನಿದ್ದೆಗೆ ಜಾರಿದ್ದರು. ಹೀಗಾಗಿ ರೈಲು ಶಿವಮೊಗ್ಗ ಟೌನ್ ರೈಲು ನಿಲ್ದಾಣ ತಲುಪಿದಾಗ ಆಕೆಗೆ ಸಮಯಕ್ಕೆ ಸರಿಯಾಗಿ ಇಳಿಯಲು ಸಾಧ್ಯವಾಗಲಿಲ್ಲ.

ವಿರುದ್ಧ ದಿಕ್ಕಿಗೆ ಕೆಳಗೆ ಹಾರಿದ್ದಾರೆ
ರೈಲು ನಿಲ್ದಾಣ ದಾಟಿ ಮುಂದೆ ಚಲಿಸಲು ಆರಂಭಿಸಿದಾಗ ತಕ್ಷಣ ಎಚ್ಚರಗೊಂಡ ಯುವತಿ, ಗಾಬರಿಯಾಗಿದ್ದಾರೆ. ತರಾತುರಿಯಲ್ಲಿ ಪ್ಲಾಟ್‌ಫಾರ್ಮ್‌ನ ವಿರುದ್ಧ ದಿಕ್ಕಿನ ಬಾಗಿಲಿನಿಂದ, ಚಲಿಸುತ್ತಿದ್ದ ರೈಲಿನಿಂದಲೇ ಕೆಳಗೆ ಹಾರಿದ್ದಾರೆ. ಇದರಿಂದ ಬಿದ್ದು ಪೆಟ್ಟಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ಈ ವೇಳೆ ರೈಲು ನಿಲ್ದಾಣದಲ್ಲಿ ಗಸ್ತು ತಿರುಗುತ್ತಿದ್ದ ‘ಅಕ್ಕ ಪಡೆ’ ಹಾಗೂ ರೈಲ್ವೆ ಪೊಲೀಸ್ ಸಿಬ್ಬಂದಿ ತಕ್ಷಣ ಧಾವಿಸಿ ಯುವತಿಯನ್ನು ರಕ್ಷಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಪ್ರಜ್ಞೆ ಬಂದ ಬಳಿಕ ವಿಚಾರಿಸಿದ್ದಾರೆ. ಗಾಬರಿಯಲ್ಲಿ ಕೆಳಗೆ ಹಾರುವ ಭರದಲ್ಲಿ ಮೊಬೈಲ್ ಫೋನ್ ಹಾಗೂ ಪರೀಕ್ಷಾ ದಾಖಲೆಗಳನ್ನು ರೈಲಿನ ಬೋಗಿಯಲ್ಲೇ ಬಿಟ್ಟಿರುವುದಾಗಿ ಯುವತಿ ತಿಳಿಸಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬೋಗಿಯಲ್ಲಿದ್ದ ಮೊಬೈಲ್ ಹಾಗೂ ದಾಖಲೆಗಳನ್ನು ಪತ್ತೆಹಚ್ಚಿ ಯುವತಿಗೆ ತಲುಪಿಸಿದ್ದಾರೆ. ಬಳಿಕ ಪೋಷಕರಿಗೆ ಮಾಹಿತಿ ನೀಡಿ, ಯುವತಿಗೆ ಧೈರ್ಯ ತುಂಬಿ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಪೊಲೀಸರ ಸಮಯಪ್ರಜ್ಞೆಯಿಂದ ಯುವತಿಯ ಜೀವ ಉಳಿದಿದ್ದಲ್ಲದೆ, ಭಾನುವಾರ ಪರೀಕ್ಷೆಯನ್ನೂ ಬರೆಯುವಂತಾಗಿದೆ.