ಶಿವಮೊಗ್ಗ: ಗಾಂಜಾ ಸಂಗ್ರಹಣೆ, ಸಾಗಾಟ ಹಾಗೂ ಮಾರಾಟ ಸೇರಿ ವಿವಿಧ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಗರದ ಸವಾಯಿಪಾಳ್ಯದ ರೌಡಿಶೀಟರ್ ಒಬ್ಬನನ್ನು ಪಿಐಟಿ ಎನ್ಡಿಪಿಎಸ್ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಅಟ್ಟಲಾಗಿದೆ. (ಈ ಸುದ್ದಿಯನ್ನು ಇನ್ನು 65 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಈ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಸವಾಯಿಪಾಳ್ಯದ ನಿವಾಸಿ ಮೊಹಮ್ಮದ್ ಅಜರುದ್ದೀನ್ ಅಲಿಯಾಸ್ ಅಜ್ಜು ಅಲಿಯಾಸ್ ಫುಕು (28) ಎಂಬಾತನನ್ನು ಬಂಧಿಸಲಾಗಿದೆ.

10ಕ್ಕೂ ಹೆಚ್ಚು ಕೇಸ್
ಆರೋಪಿ ಅಜರುದ್ದೀನ್ ವಿರುದ್ಧ ದೊಡ್ಡಪೇಟೆ, ಭದ್ರಾವತಿ ಹಳೆ ನಗರ, ಜಯನಗರ ಹಾಗೂ ತುಂಗಾನಗರ ಪೊಲೀಸ್ ಠಾಣೆಗಳಲ್ಲಿ ಎನ್ಡಿಪಿಎಸ್ ಪ್ರಕರಣಗಳು ಸೇರಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದೊಡ್ಡಪೇಟೆ ಠಾಣೆಯಲ್ಲಿ ಕೊಲೆ ಯತ್ನ, ವಂಚನೆ, ಮಹಿಳೆ ಮೇಲೆ ಹಲ್ಲೆ, ದೊಂಬಿ. ತುಂಗಾನಗರ ಠಾಣೆಯಲ್ಲಿ ಸುಲಿಗೆ, ಕೋಕಾ ಕಾಯ್ದೆ ಅಡಿ ಪ್ರಕರಣಗಳು ದಾಖಲಾಗಿವೆ.
ಬಳ್ಳಾರಿ ಜೈಲಿಗೆ ರವಾನೆ
ಆರೋಪಿಯು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ನಿರಂತರವಾಗಿ ಗಾಂಜಾ ಜಾಲದಲ್ಲಿ ತೊಡಗಿಸಿಕೊಂಡಿದ್ದ. ಯುವಜನತೆಯ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ. ಆದ್ದರಿಂದ ಮೊಹಮ್ಮದ್ ಅಜರುದ್ದೀನ್ ವಿರುದ್ಧ ಪಿಐಟಿ ಎನ್ಡಿಪಿಎಸ್ ಕಾಯ್ದೆ 1988ರ ಅಡಿ ಕ್ರಮ ಕೈಗೊಳ್ಳಲು ದೊಡ್ಡಪೇಟೆ ಇನ್ಸ್ಪೆಕ್ಟರ್ ಹಾಗೂ ಶಿವಮೊಗ್ಗ ಎ ಉಪವಿಭಾಗದ ಡಿಎಸ್ಪಿ ಅವರು ಶಿವಮೊಗ್ಗ ಎಸ್ಪಿ ಮುಖಾಂತರ ಪೂರ್ವ ವಲಯ ಐಜಿಪಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಸ್ತಾವನೆ ಪರಿಶೀಲಿಸಿದ ಐಜಿಪಿ ಅವರು ಆರೋಪಿಯನ್ನು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಮುಂಜಾಗ್ರತಾ ಬಂಧನದಲ್ಲಿಡಲು ಆದೇಶಿಸಿದ್ದಾರೆ. ಮಾದಕ ವಸ್ತುಗಳ ಅಕ್ರಮ ಜಾಲದ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ. ಸಾರ್ವಜನಿಕರು ಡ್ರಗ್ಸ್ ಮಾರಾಟ ಅಥವಾ ಸಾಗಣೆ ಕುರಿತು ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ತಿಳಿಸಿದೆ.