ರಿಪ್ಪನ್‌ಪೇಟೆ: ಸಮೀಪದ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಳಲಿ ಸಂಸ್ಥಾನ ಮಠದಲ್ಲಿ ಕಾರ್ತಿಕ ಧರ್ಮ ದೀಪೋತ್ಸವ ಸಮಾರಂಭ ಆಯೋಜಸಲಾಗಿತ್ತು. ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. (ಈ ಸುದ್ದಿಯನ್ನು ಇನ್ನು 96 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಶ್ರೀಗಳು ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್

ಕಾರ್ತಿಕ ದೀಪೋತ್ಸವವು ಭಾರತೀಯ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಪವಿತ್ರ ಆಚರಣೆಯಾಗಿದೆ. ದೀಪ ಬೆಳಗಿಸುವುದು ಕೇವಲ ಧಾರ್ಮಿಕ ಸಂಪ್ರದಾಯವಲ್ಲ. ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ಹರಡುವ ಜೀವನ ಸಂದೇಶವಾಗಿದೆ.


ಶಿವ ತತ್ವದಲ್ಲಿ ಜ್ಯೋತಿಯು ಪರಮ ಚೈತನ್ಯದ ಸಂಕೇತವಾಗಿದೆ. ಬಾಹ್ಯ ದೀಪ ಬೆಳಗುವಂತೆ ಪ್ರತಿಯೊಬ್ಬರ ಅಂತರಂಗದಲ್ಲೂ ಜ್ಞಾನ, ವಿವೇಕ, ಸತ್ಯನಿಷ್ಠೆ ಹಾಗೂ ಮಾನವೀಯತೆಯ ಬೆಳಕು ಮೂಡಬೇಕು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ ಶಿವತತ್ವ, ಅಷ್ಟಾವರಣ, ಪಂಚಾಚಾರ ಹಾಗೂ ಷಟ್ಸ್ಥಲ ಸಿದ್ಧಾಂತಗಳನ್ನು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳಿಸದೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಮಠಗಳು ಧರ್ಮ ಸಂರಕ್ಷಣೆಯೊಂದಿಗೆ ಶಿಕ್ಷಣ, ಸಂಸ್ಕಾರ, ಸಮಾನತೆ, ಸಹಬಾಳ್ವೆ ಹಾಗೂ ಸೇವಾ ಭಾವನೆಗಳನ್ನು ಬೆಳೆಸುವ ಪವಿತ್ರ ಕ್ಷೇತ್ರಗಳಾಗಿವೆ. ಇಂತಹ ಆಚರಣೆಗಳು ಬೆಳೆಯುವ ಯುವ ಪೀಳಿಗೆಯಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಹಾಗೂ ಸಾಂಸ್ಕೃತಿಕ ಅಭಿಮಾನವನ್ನು ಜಾಗೃತಗೊಳಿಸಬೇಕು.
ಯಾರೆಲ್ಲ ಏನೆಲ್ಲ ಹೇಳಿದರು?
ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ: ‘ಇಂದಿನ ಸಮಾಜಕ್ಕೆ ಕೇವಲ ಸಾವಿರಾರು ದೀಪಗಳ ಬೆಳಕಲ್ಲ; ಮನುಷ್ಯನ ಮನಸ್ಸಿನಲ್ಲಿರುವ ದ್ವೇಷ, ಅಸೂಯೆ, ಅಹಂಕಾರ ಮತ್ತು ಅಜ್ಞಾನವನ್ನು ನಿವಾರಿಸುವ ಜ್ಞಾನದ ಬೆಳಕು ಬೇಕಾಗಿದೆ.’
ಆರಗ ಜ್ಞಾನೇಂದ್ರ, ಶಾಸಕರು: ‘ಧರ್ಮವು ನಮ್ಮನ್ನು ವಿಭಜಿಸಬಾರದು. ನಮ್ಮೆಲ್ಲರನ್ನು ಉನ್ನತೀಕರಣದತ್ತ ಕೈ ಹಿಡಿದು ಕರೆದೊಯ್ಯುವ ಮಹಾನ್ ಶಕ್ತಿ ಧರ್ಮಕ್ಕೆ ಹೊರತು ಬೇರೆ ಯಾವುದಕ್ಕೂ ಇಲ್ಲ.’
ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠ: ‘ವೀರಶೈವ ಧರ್ಮ ಸಂಸ್ಕೃತಿ ಮನುಷ್ಯನ ಅಂತರಂಗವನ್ನು ಪರಿಶುದ್ಧಗೊಳಿಸಿ ಸನ್ಮಾರ್ಗದತ್ತ ಕರೆದೊಯ್ಯುವ ಜೀವನ ದರ್ಶನವಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಶಾಂತಿ ಹಾಗೂ ಸಮಾಜದಲ್ಲಿ ಸಹೋದರತ್ವದ ಜ್ಯೋತಿ ಬೆಳಗಬೇಕು.’
ಆರ್.ಎಸ್. ಪ್ರಶಾಂತ್, ಹಿರಿಯ ಪತ್ರಕರ್ತ: ‘ದೇವರ ಮುಂದೆ ಬೆಳಗುವ ದೀಪಕ್ಕಿಂತ ದುಃಖದಲ್ಲಿರುವವರ ಬದುಕಿನಲ್ಲಿ ಬೆಳಗಿಸುವ ದೀಪ ಶ್ರೇಷ್ಠ. ದೀಪದಿಂದ ದೀಪ ಹಚ್ಚುವಂತೆ ಜ್ಞಾನದಿಂದ ದೀಪವನ್ನು ಹಚ್ಚೋಣ.’
ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಸಿ.ಹೆಚ್. ಬಾಳನಗೌಡ್ರು, ಡಿ.ಆರ್. ವಿಜಯ್‌ಕುಮಾರ್ ದುಮ್ಮ, ಹೆಚ್.ಎನ್. ವ್ಯೋಮಕೇಶಗೌಡ್ರು, ಹಾಲಗುಡ್ಡೆ ಈಶ್ವರಪ್ಪಗೌಡ್ರು, ವಸವೆ ಪರಮೇಶ್ವರಗೌಡರು, ಡಾ. ಶಶಿಕಾಂತ್ ಹುಗುಡಿ ಹಾಗೂ ಡಾ. ಸುಧೀನ ಪಾಟೀಲ್ ಕಗ್ಗಲಿ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ ಸೇರಿ ಹಲವು ಗಣ್ಯರು ಹಾಗೂ ವಿವಿಧ ಮಠಗಳ ಶ್ರೀಗಳು ಭಾಗವಹಿಸಿದ್ದರು.