ಶಿವಮೊಗ್ಗ: ಮಲೆನಾಡಿನ ನೈಸರ್ಗಿಕ ಸೌಂದರ್ಯ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಆಧರಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾದೇಶಿಕ ಫಿಲ್ಮ್ ಸಿಟಿ ಸ್ಥಾಪಿಸುವ ಸಂಬಂಧ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮೆಹಬೂಬ್ ಪಾಷ ಅವರು ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಿದರು. ಭೇಟಿಯ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು. (ಈ ಸುದ್ದಿಯನ್ನು ಇನ್ನು 74 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಸಚಿವರ ಸ್ಪಂದನೆ, ಭರವಸೆ
ಉದ್ದೇಶಿತ ಫಿಲ್ಮ್ ಸಿಟಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಕಡಿಮೆ ಅವಧಿಯಲ್ಲಿ ಗುರುತಿಸಿ ಹಸ್ತಾಂತರಿಸಲು ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಮೆಹಬೂಬ್ ಪಾಷಾ ತಿಳಿಸಿದ್ದಾರೆ.

ಸಭೆಯಲ್ಲಿ ಅಧ್ಯಕ್ಷರು ಏನೆಲ್ಲ ಹೇಳಿದರು?
ಸಭೆಗಳಲ್ಲಿ ಮಾತನಾಡಿದ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮೆಹಬೂಬ್ ಪಾಷ, ಸರ್ಕಾರವು ಇತ್ತೀಚೆಗೆ ಮೈಸೂರಿನ ಇಮ್ಮಾವು ಪ್ರದೇಶದಲ್ಲಿ ₹729.43 ಕೋಟಿ ವೆಚ್ಚದ ಅಂತಾರಾಷ್ಟ್ರೀಯ ಫಿಲ್ಮ್ ಸಿಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮೈಸೂರು ಸಾಂಸ್ಕೃತಿಕ ಪರಂಪರೆಯ ಸಂಕೇತವಾದರೆ, ಶಿವಮೊಗ್ಗ ಮಲೆನಾಡಿನ ಸೌಂದರ್ಯ ಹಾಗೂ ಪಶ್ಚಿಮ ಘಟ್ಟಗಳ ಪರಿಸರಕ್ಕೆ ಹೆಸರಾಗಿದೆ. ಹೀಗಾಗಿ ಶಿವಮೊಗ್ಗದಲ್ಲಿ ಮಲೆನಾಡು ಆಧಾರಿತ ಕಿರು ಫಿಲ್ಮ್ ಸಿಟಿ ಅಥವಾ ಪ್ರಾದೇಶಿಕ ಚಲನಚಿತ್ರ ನಿರ್ಮಾಣ ಕೇಂದ್ರ ಸ್ಥಾಪಿಸಲು ಯೋಜಿಸಲಾಗಿದೆ ಎಂದರು.
ಫಿಲ್ಮ್ ಸಿಟಿಯನ್ನು ಕೇವಲ ಸಿನಿಮಾ ಚಿತ್ರೀಕರಣಕ್ಕೆ ಸೀಮಿತಗೊಳಿಸದೆ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಹೂಡಿಕೆ, ಸ್ಥಳೀಯ ಆರ್ಥಿಕತೆ ಹಾಗೂ ಸಾಂಸ್ಕೃತಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಾಪಿಸಲಾಗುವುದು. ಯೋಜನೆಯಿಂದಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಲಿದ್ದು, ಸ್ಥಳೀಯ ವ್ಯಾಪಾರ-ವಹಿವಾಟಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮೆಹಬೂಬ್ ಪಾಷಾ ತಿಳಿಸಿದರು.
ನಟರು, ತಂತ್ರಜ್ಞರು, ಛಾಯಾಗ್ರಾಹಕರು, ಸಂಕಲನಕಾರರು, ಕಲಾವಿದರು ಹಾಗೂ ಕಾರ್ಮಿಕರು ಸೇರಿದಂತೆ ಸಾವಿರಾರು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ದೊರೆಯಲಿದೆ. ಹೋಟೆಲ್, ವಸತಿ, ಸಾರಿಗೆ, ಆಹಾರ, ನಿರ್ಮಾಣ ಹಾಗೂ ಸೇವಾ ಕ್ಷೇತ್ರಗಳಿಗೆ ಭಾರಿ ಉತ್ತೇಜನ ಸಿಗಲಿದೆ ಎಂದರು.