27 ವರ್ಷದ ಇಬ್ಬರು ಯುವಕರಿಗೆ ಕಠಿಣ ಜೈಲು ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್

ಶಿವಮೊಗ್ಗ: 16 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಪ್ರಶ್ನಿಸಲು ಬಂದ ಆಕೆಯ ತಂದೆಯ ಮೇಲೆಯೇ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ 27 ವರ್ಷದ ಇಬ್ಬರು ಯುವಕರಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. (ಈ ಸುದ್ದಿಯನ್ನು ಇನ್ನು 57 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪ್ರಥಮ ಆರೋಪಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹1.21 ಲಕ್ಷ ದಂಡ ವಿಧಿಸಲಾಗಿದೆ. ಎರಡನೇ ಆರೋಪಿಗೆ 3 ವರ್ಷ ಕಠಿಣ ಕಾರಾಗೃಹವಾಸ ಹಾಗೂ ₹41 ಸಾವಿರ ದಂಡ ವಿಧಿಸಿ ನ್ಯಾಯಾಧೀಶರಾದ ನಿಂಗನಗೌಡ ಭ. ಪಾಟೀಲ್ ಆದೇಶಿಸಿದ್ದಾರೆ.

Shivamogga-Court-Building

ಲೈಂಗಿಕ ಕಿರುಕುಳ, ತಂದೆಗೆ ಹಲ್ಲೆ

ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ 27 ವರ್ಷದ ಓರ್ವ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದ. ಇದನ್ನು ಬಾಲಕಿಯ ತಂದೆ ವಿರೋಧಿಸಿದ್ದರು. ಆಕ್ರೋಶಗೊಂಡ ಮೊದಲನೇ ಆರೋಪಿ, 27 ವರ್ಷದ ತನ್ನ ಸ್ನೇಹಿತನೊಂದಿಗೆ ಸೇರಿ ಬಾಲಕಿಯ ತಂದೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಪಿಎಸ್‍ಐ ಶಿವಪ್ರಸಾದ್.ವಿ ಅವರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಆರೋಪಿಗಳಿಂದ ವಸೂಲು ಮಾಡುವ ದಂಡದ ಮೊತ್ತದಲ್ಲಿ ₹1 ಲಕ್ಷ ಹಾಗೂ ಸರ್ಕಾರದ ವತಿಯಿಂದ ₹10 ಸಾವಿರ ಪರಿಹಾರವನ್ನು ಸಂತ್ರಸ್ತ ಬಾಲಕಿಗೆ ನೀಡುವಂತೆ ಕೋರ್ಟ್ ಆದೇಶಿಸಿದೆ. ಸರ್ಕಾರಿ ಅಭಿಯೋಜಕ ಶ್ರೀಧರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: