ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 11 ಜುಲೈ 2019
ಇನ್ಮುಂದೆ ತೀರ್ಥಹಳ್ಳಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವಂತಿಲ್ಲ. ಮೂತ್ರ ಮಾಡುವಂತಿಲ್ಲ. ಹಸಿ ಮತ್ತು ಒಣ ಕಸವನ್ನು ವಿಂಗಡಿಸದೆ ಕಸದ ವಾಹನಕ್ಕೆ ಕೊಡುವಂತಿಲ್ಲ. ಹೀಗೆಲ್ಲ ಮಾಡಿದರೆ ದಂಡ ಮತ್ತು ಕಠಿಣ ಕ್ರಮ ಗ್ಯಾರಂಟಿ.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಆಡಳಿತಾಧಿಕಾರಿ, ತಹಶೀಲ್ದಾರ್ ಆನಂದಪ್ಪ ನಾಯ್ಕ್, ಕಸದ ಉತ್ಪಾದರೆ ಅದರ ನಿರ್ವಾಹಕರು. ಆದ್ದರಿಂದ ಕಸದ ವಿಂಗಡನೆ ವಿಚಾರದಲ್ಲಿ ಜಾಗೃತಿ ವಹಿಸಬೇಕು ಎಂದು ಎಚ್ಚರಿಸಿದರು.
ಹಸಿ, ಒಣ ಕಸ ಬೇರ್ಪಡಿಸಿ

ಪಟ್ಟಣದ ಎಲ್ಲ ವಾರ್ಡ್’ಗಳಲ್ಲಿನ ಮನೆಗಳಲ್ಲೂ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ವಾಹನಗಳಿಗೆ ಹಾಕಬೇಕು. ಒಂದು ವೇಳೆ ಕಸವನ್ನು ವಿಂಗಡಿಸದಿದ್ದರೆ, ಅಂತಹವರಿಗೆ ದಂಡ ವಿಧಿಸಲಾಗುತ್ತದೆ ಎಂದು ತಹಶೀಲ್ದಾರ್ ಆನಂದಪ್ಪನಾಯ್ಕ್ ತಿಳಿಸಿದರು. ಇನ್ನು, ಖಾಸಗಿ ಜಾಗಗಳಲ್ಲಿ ಕಸ ಹಾಕುವುದು, ಸಾರ್ವಜನಿಕ ಸ್ಥಳಗಳಲ್ಲಿ ಚರಂಡಿ, ಕಾಲುವೆಗಳಿಗೆ ಕೊಳಚೆ ನೀರು ಹರಿಸುವುದು, ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ದಂಡ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪ್ಲಾಸ್ಟಿಕ್ ಸಂಪೂರ್ಣ ನಿಷೇಧ
ಶಿವಮೊಗ್ಗ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧವಿದೆ. ಹಾಗಾಗಿ ತೀರ್ಥಹಳ್ಳಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬ್ಯಾಗ್, ತಟ್ಟೆ, ಲೋಟ, ಥರ್ಮಕೋಲ್ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ. ಪಟ್ಟಣದಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಡಳಿತಾಧಿಕಾರಿ ಸ್ಪಷ್ಟಪಡಿಸಿದರು.
ಸ್ವಚ್ಛ ತೀರ್ಥಹಳ್ಳಿ ಮಾಡುವ ಸಂಬಂಧ ಅಧಿಕಾರಿಗಳು ಗಮನ ಹರಿಸಬೇಕು. ಉದ್ಯಾನವನ, ಚರಂಡಿ, ರಾಜಕಾಲುವೆಗಳ ನಿರ್ವಹಣೆ ಸಮಪರ್ಕವಾಗಿ ಇರಬೇಕು. ಇನ್ನು, ತುಂಗಾ ನದಿ ತೀರದಲ್ಲಿ ಪ್ಲಾಸ್ಟಿಕ್ ವಸ್ತುಗಳ ರಾಶಿ ಬಿದ್ದಿದ್ದು ಸಮಸ್ಯೆ ಉಂಟಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದರು.
ಪಟ್ಟಣ ಪಂಚಾಯಿತಿಯ ವಿವಿಧ ವಿಭಾಗಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]