ಶಿವಮೊಗ್ಗ: ಮಟನ್ ಕಡಿಯುವ ಮಚ್ಚಿನಿಂದ ಪತ್ನಿಯ ಮೇಲೆ ಪತಿಯೇ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಗರದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಮಹಿಳೆ ಪಾರಾಗಿದ್ದಾರೆ. (ಈ ಸುದ್ದಿಯನ್ನು ಇನ್ನು 38 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಗೃಹಿಣಿ ಸಮೀನಾ ಖಾನಂ ಹಲ್ಲೆಗೊಳಗಾದವರು. ಅವರ ಪತಿ ಅಲ್ಲಾಭಕ್ಷಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಮೀನಾ ಖಾನಂ ಅವರು ಮನೆಯಲ್ಲಿ ಸೋಫಾ ಮೇಲೆ ಕುಳಿತು ಮೊಬೈಲ್ ಫೋನ್ ನೋಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪತಿ ಅಲ್ಲಾಭಕ್ಷಿ, ಯಾರ ಜೊತೆಗೊ ಮೆಸೇಜ್ ಮಾಡುತ್ತಿರುವ ಶಂಕೆ ವ್ಯಕ್ತಪಡಿಸಿ ಮಟನ್ ಕಡಿಯುವ ಮಚ್ಚಿನಿಂದ ಪತ್ನಿಯ ಕುತ್ತಿಗೆಯ ಹಿಂಭಾಗಕ್ಕೆ ಬೀಸಿದ್ದಾರೆ ಎಂದು ಆರೋಪಿಸಲಾಗಿದೆ.

ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮತ್ತೊಮ್ಮೆ ಮಚ್ಚು ಬೀಸಿದ್ದು ಸಮೀನಾ ಖಾನಂ ಅವರ ತಲೆಗೆ ಗಂಭೀರ ಗಾಯವಾಗಿದೆ. ಕೂಡಲೆ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ನಗರದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.