ಶಿವಮೊಗ್ಗ ಲೈವ್
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ನಗರದ ರೈಲ್ವೆ ನಿಲ್ದಾಣದಿಂದ ಕಾಶಿಪುರಕ್ಕೆ ತೆರಳಲು ಪ್ರೀ-ಪೇಯ್ಡ್ ಆಟೋ ಟಿಕೆಟ್ ಪಡೆದಿದ್ದ ಪ್ರಯಾಣಿಕರಿಂದ ಅಧಿಕ ಹಣಕ್ಕೆ ಬೇಡಿಕೆ ಇಟ್ಟು, ಅನುಚಿತವಾಗಿ ವರ್ತಿಸಿದ ಆಟೋ ಚಾಲಕನ ವಿರುದ್ಧ ಮೋಟಾರು ವಾಹನ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.

ಆಗಸ್ಟ್ 21ರ ರಾತ್ರಿ ರೈಲ್ವೆ ನಿಲ್ದಾಣದಿಂದ ಕಾಶಿಪುರಕ್ಕೆ ಪ್ರಯಾಣಿಸಲು ಪ್ರಯಾಣಿಕರೊಬ್ಬರು ಪ್ರೀ-ಪೇಯ್ಡ್ ಆಟೋ ಟಿಕೆಟ್ ಪಡೆದಿದ್ದರು. ಟಿಕೆಟ್‌ನಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿಯಾಗಿ ₹40 ಹಣವನ್ನು ನೀಡುವಂತೆ ಚಾಲಕ ಬೇಡಿಕೆ ಇಟ್ಟಿದ್ದರು. ಅಲ್ಲದೆ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಯಾಣಿಕರು ನೀಡಿದ ದೂರಿನ ಹಿನ್ನೆಲೆ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಪರ್ಮಿಟ್ ನಿಯಮ ಉಲ್ಲಂಘನೆ ಅಡಿಯಲ್ಲಿ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಶಿವಮೊಗ್ಗ ಸಂಚಾರ ಪೊಲೀಸರು ತಿಳಿಸಿದ್ದಾರೆ.