ಶಿವಮೊಗ್ಗ: ನಗರದ ಜೆ.ಹೆಚ್.ಪಟೇಲ್ ಬಡಾವಣೆಯ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಮಹಾಸಭಾದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕೆಳದಿ ಶಿವಪ್ಪನಾಯಕ, ಕೆಳದಿ ರಾಣಿ ಚನ್ನಮ್ಮ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರಿಗೆ ಮರಣೋತ್ತರವಾಗಿ ಕೊಡಮಾಡಿದ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿಯನ್ನು ಮಹಾಸಭಾ ಅಧ್ಯಕ್ಷ ಈಶ್ವರ ಖಂಡ್ರೆ ಸ್ವೀಕರಿಸಿದರು. (ಈ ಸುದ್ದಿಯನ್ನು ಇನ್ನು 83 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ದೇಶದಲ್ಲಿ ಬಲಿದಾನ್ ಬ್ಯಾಡ್ಸ್ ಪಡೆದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೇಜರ್ ಡಾ. ದೀಕ್ಷಾ ಸಿ. ಮುದದೇವಣ್ಣನವರ್ ಅವರಿಗೆ 2025-26ನೇ ಸಾಲಿನ ಕೆಳದಿ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇನ್ನು, 2025-26ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ 400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಈಶ್ವರ ಖಂಡ್ರೆ ಏನೆಲ್ಲ ಹೇಳಿದರು?
ಕಾರ್ಯಕ್ರಮದಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ, ಸಚಿವ ಈಶ್ವರ ಖಂಡ್ರೆ, ಎಲ್ಲ ಜಾತಿ, ಸಮುದಾಯಗಳನ್ನು ತನ್ನೊಟ್ಟಿಗೆ ಕೊಂಡೊಯ್ಯುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ. ಜಗತ್ತಿನ ಯಾವುದೇ ಶಕ್ತಿಯು ಸಮಾಜವನ್ನು ಬೇರೆ ಮಾಡಲು ಸಾಧ್ಯವಿಲ್ಲ ಎಂದರು.
ವೀರಶೈವ-ಲಿಂಗಾಯತ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರೇ ಸ್ವಹಸ್ತಾಕ್ಷರದಲ್ಲಿ ಬರೆದುಕೊಟ್ಟಿದ್ದಾರೆ. ನಮ್ಮ ಸಮಾಜಕ್ಕೆ ಬಸವಾದಿ ಶರಣರು, ರೇಣುಕಾದಿ ಆಚಾರ್ಯರ ಹಾಗೂ ಗುರುವಿರಕ್ತರ ಆಶೀರ್ವಾದವಿದೆ. ನಮ್ಮ ಸಮಾಜವನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದರು.
ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಎಂಎಲ್ಸಿ ಆಯನೂರು ಮಂಜುನಾಥ್, ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮಹಾಸಭಾ ಜಿಲ್ಲಾ ಅಧ್ಯಕ್ಷ ರುದ್ರಮುನಿ ಎನ್. ಸಜ್ಜನ್, ಕೃಷಿ ಹಾಗೂ ತೋಟಗಾರಿಕೆ ವಿವಿ ಕುಲಪತಿ ಡಾ. ಎಂ.ವಿ.ಧನಂಜಯ, ಬಿ.ಕೆ.ಶಿವಕುಮಾರ್, ಡಾ. ಬಿ.ಡಿ.ಭೂಕಾಂತ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹೆಚ್.ಸಿ.ಯೋಗೇಶ್, ಇ.ವಿಶ್ವಾಸ್, ಎಸ್.ಎನ್.ಮಹಾಲಿಂಗ ಶಾಸ್ತ್ರಿ, ಹೆಚ್.ಬಿ.ದಿನೇಶ್ ಬುಳ್ಳಾಪುರ, ಜಿ.ಎನ್.ಸುಧೀರ್, ಬೆನಕಪ್ಪ, ಅನಿತಾ ರವಿಶಂಕರ್, ಬಿ.ಎಂ. ಜಗದೀಶ್, ಬಳ್ಳೇಕೆರೆ ಸಂತೋಷ್ ಸೇರಿ ಇತರರಿದ್ದರು.