ಶಿವಮೊಗ್ಗ: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಭದ್ರಾವತಿಯ ಉದ್ಯಮಿಯೊಬ್ಬರಿಗೆ ಬರೋಬ್ಬರಿ ₹39.76 ಲಕ್ಷಕ್ಕೂ ಅಧಿಕ ಹಣ ವಂಚಿಸಿಲಾಗಿದೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಉದ್ಯಮಿಯು ಇನ್‌ಸ್ಟಾಗ್ರಾಮ್ ವೀಕ್ಷಿಸುತ್ತಿದ್ದಾಗ ವಿವಿಧ ಕಂಪನಿಗಳ ಟ್ರೇಡಿಂಗ್ ಜಾಹೀರಾತುಗಳು ಕಾಣಿಸಿಕೊಂಡಿದ್ದವು. ಹೆಚ್ಚಿನ ಲಾಭದ ಆಮಿಷಕ್ಕೆ ಒಳಗಾದ ಉದ್ಯಮಿ, ಲಿಂಕ್ ಕ್ಲಿಕ್ ಮಾಡಿ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಹಂಚಿಕೊಂಡಿದ್ದರು. ಬಳಿಕ ಹಣ ಹೂಡಿಕೆ ಮಾಡಿದರೆ ಉದ್ಯಮಿಯ ಹೆಸರಿನಲ್ಲಿ ಡಿ-ಮ್ಯಾಟ್ ಖಾತೆ ತೆರೆಯಲಾಗುತ್ತದೆ ಎಂದು ತಿಳಿಸಿದ್ದರು. ಆದರೆ ಅವುಗಳ ಲಾಗಿನ್ ಐಡಿ, ಪಾಸ್‌ವರ್ಡ್ ಅನ್ನು ವಂಚಕರು ತಾವೇ ಇಟ್ಟುಕೊಂಡು ಉದ್ಯಮಿಗೆ ವಂಚಿಸಿದ್ದರು.

ಬಳಿಕ ದೂರುದಾರರನ್ನು ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿದ್ದ ವಂಚಕರು, ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳನ್ನು ಕಳುಹಿಸಿ 2023ರ ಜೂನ್‌ನಿಂದ 2026ರ ಮೇ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹39,76,171.41 ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ದೂರುದಾರರು ತಮ್ಮ ಹಣ ಹಿಂಪಡೆಯಲು ಯತ್ನಿಸಿದಾಗಲೆಲ್ಲಾ, ಈಗಲೇ ಹಣ ತೆಗೆದರೆ ನಷ್ಟವಾಗುತ್ತದೆ ಎಂದು ನಂಬಿಸುತ್ತಾ ಬಂದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇತ್ತೀಚೆಗೆ ದೂರುದಾರರಿಗೆ ತುರ್ತು ಹಣದ ಅವಶ್ಯಕತೆ ಇದ್ದಿದ್ದರಿಂದ ಹೂಡಿಕೆ ಮುಕ್ತಾಯಗೊಳಿಸಲು ಕೋರಿದಾಗ, ವಂಚಕರು ಅವರ ಡಿ-ಮ್ಯಾಟ್ ಖಾತೆಯನ್ನೇ ಸ್ಥಗಿತಗೊಳಿಸಿ ಸಂಪರ್ಕ ಕಡಿತಗೊಳಿಸಿದ್ದಾರೆ. ಆಗ ತಾವು ವಂಚನೆಗೊಳಗಾಗಿರುವುದು ಅರಿವಿಗೆ ಬಂದ ಹಿನ್ನೆಲೆ ಉದ್ಯಮಿ ಪೊಲೀಸರ ಮೊರೆ ಹೋಗಿದ್ದಾರೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.