ಶಿವಮೊಗ್ಗ: ‘ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತಪ್ಪು ಮಾಹಿತಿ ಹರಡುತ್ತಿದ್ದು, ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಗ್ಯಾರಂಟಿ ಯೋಜನೆಗಳ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಹೆಚ್.ಎಂ. ಮಧು ಸ್ಪಷ್ಟಪಡಿಸಿದರು. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಯೋಜನೆಗಳನ್ನು ನಿಲ್ಲಿಸುವ ಕುರಿತು ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಯೋಜನೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ. ಹೀಗಾಗಿ ಫಲಾನುಭವಿಗಳು ಗೊಂದಲಕ್ಕೆ ಈಡಾಗಬಾರದುʼ ಎಂದರು.
ಇದೇ ವೇಳೆ, ತಾಂತ್ರಿಕ ಕಾರಣ ಅಥವಾ ಬ್ಯಾಂಕ್ ಖಾತೆ ಜೋಡಣೆ ಸಮಸ್ಯೆಯಿಂದ ಬಾಕಿ ಉಳಿದಿರುವ ಮಹಿಳೆಯರ ಖಾತೆಗಳಿಗೆ ಶೀಘ್ರವಾಗಿ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾಲ್ಲೂಕಿನಲ್ಲಿ ಈವರೆಗೆ 1,08,232 ಫಲಾನುಭವಿಗಳು ನೋಂದಣಿಯಾಗಿದ್ದು, 42 ಜನರ ಎನ್‌ಪಿಸಿಐ ಬಾಕಿ ಇದೆ. 2,044 ಐಟಿ/ಜಿಎಸ್‌ಟಿ ಫಲಾನುಭವಿಗಳಿದ್ದು, 304 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಉಪಾಧ್ಯಕ್ಷ ಆರ್.ಶಿವಣ್ಣ, ತಾ.ಪಂ. ಇಒ ಪರಮೇಶ್ ಹಾಜರಿದ್ದರು.