ಗಾಜನೂರು ಚೆಕ್‌ ಪೋಸ್ಟ್‌ ಬಳಿ ಅಪಘಾತ, ವಿದ್ಯಾನಗರ, ಹರಿಗೆ ನಿವಾಸಿಗಳಿಗೆ ಗಾಯ, ಹೇಗಾಯ್ತು ಘಟನೆ?

ಶಿವಮೊಗ್ಗ: ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕುಟುಂಬ ಇದ್ದ ಕಾರಿಗೆ ಹೊಂಡಾ ಸಿಟಿ ಕಾರು ಡಿಕ್ಕಿ ಹೊಡೆದಿದ್ದು, ಮಗು ಸೇರಿ ಹಲವರು ಗಾಯಗೊಂಡಿದ್ದಾರೆ. ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯ ಗಾಜನೂರು ಚೆಕ್‌ಪೋಸ್ಟ್ ಬಳಿ ಘಟನೆ ನಡೆದಿದೆ.

ವಿದ್ಯಾನಗರದ ಪ್ರಿಯಾಂಕ ಲೇಔಟ್‌ ನಿವಾಸಿ ಮಹಮ್ಮದ್ ಅಲಿ ಹಾಗೂ ಅವರ ಕುಟುಂಬದವರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಮಹಮ್ಮದ್ ಅಲಿ ಅವರು ತಮ್ಮ ಡಸ್ಟರ್ ಕಾರಿನಲ್ಲಿ ಪತ್ನಿ ಮೈಮೂನ್, ಹರಿಗೆ ನಿವಾಸಿಗಳಾದ ಅನುಷಾ ಸಿಂಗ್, ಮೋನಿಕಾ ಹಾಗೂ 3 ವರ್ಷದ ಮಗು ದೃತಿ ಅವರೊಂದಿಗೆ ಸಹದ್ಯೋಗಿ ಒಬ್ಬರ ಮದುವೆ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದರು.

ACCIDENT-NEWS-GENERAL-IMAGE.

ಗಾಜನೂರು ಚೆಕ್‌ಪೋಸ್ಟ್ ಬಳಿ ತಲುಪಿದಾಗ, ತೀರ್ಥಹಳ್ಳಿ ಕಡೆಯಿಂದ ಬಂದ ಹೊಂಡಾ ಸಿಟಿ ಕಾರು ಇವರ ಡಸ್ಟರ್ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಕಾರು ಜಖಂಗೊಂಡಿದ್ದು, ಮಹಮ್ಮದ್ ಅಲಿ ಅವರ ಕೈಗಳಿಗೆ, ಅನುಷಾ ಸಿಂಗ್ ಅವರ ಬಲಭುಜ ಹಾಗೂ ಕಾಲಿಗೆ ತೀವ್ರ ಗಾಯಗಳಾಗಿವೆ. ಇನ್ನು ಮೋನಿಕಾ ಹಾಗೂ ಮೈಮೂನ್ ಅವರಿಗೆ ತಲೆಗೆ ಪೆಟ್ಟು ಬಿದ್ದಿದೆ. 3 ವರ್ಷದ ಮಗು ದೃತಿಗೆ ಕಾಲಿಗೆ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಹೊಂಡಾ ಸಿಟಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.