ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಚಿಕಿತ್ಸೆಯ ಬಿಲ್ ಮರುಪಾವತಿ ಮಾಡದೆ ಸೇವಾ ನ್ಯೂನತೆ ಎಸಗಿದ ಹೆಲ್ತ್ ಇನ್ಶೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ಹಾಗೂ ಬಡ್ಡಿ ಸಹಿತ ಪರಿಹಾರ ಪಾವತಿಸುವಂತೆ ಆದೇಶಿಸಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿ ವಿವೇಕ ಸಿ.ಬಿ. ಎಂಬುವವರು 2021ರಲ್ಲಿ ಹಣ ಪಾವತಿಸಿ ಹೆಲ್ತ್ ಇನ್ಸೂರೆನ್ಸ್ ಪಾಲಿಸಿ ಪಡೆದಿದ್ದರು. ಅನಾರೋಗ್ಯದ ಕಾರಣ 2023ರಲ್ಲಿ ಶಿವಮೊಗ್ಗದ ಅಶೋಕ ಸಂಜೀವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಕಂಪನಿಯು ಅಂತಿಮ ಬಿಲ್ ಮೊತ್ತ ₹19,342 ಅನ್ನು ಆಸ್ಪತ್ರೆಗೆ ಪಾವತಿಸಿರಲಿಲ್ಲ. ಕಂಪನಿಯು ಹಣ ಪಾವತಿಸದ ಹಿನ್ನೆಲೆ ದೂರುದಾರರು ಜಿಲ್ಲಾ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.

ದೂರು ಪರಿಶೀಲಿಸಿದ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ. ಯೋಗಾನಂದ ಅವರನ್ನೊಳಗೊಂಡ ಪೀಠವು, ವಿಮಾ ಸಂಸ್ಥೆಯ ಸೇವಾ ನ್ಯೂನತೆಯನ್ನು ಎತ್ತಿಹಿಡಿದಿದೆ. ಚಿಕಿತ್ಸಾ ವೆಚ್ಚದ ₹19,342 ಅನ್ನು ಶೇ.8 ರಷ್ಟು ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ಪಾವತಿಸಬೇಕು. ಮಾನಸಿಕ ಹಿಂಸೆಗೆ ₹10,000 ಹಾಗೂ ದೂರಿನ ಖರ್ಚಿಗಾಗಿ ₹10,000 ನೀಡುವಂತೆ ಆದೇಶಿಸಿದೆ. ತಪ್ಪಿದಲ್ಲಿ ಬಡ್ಡಿ ಶೇ.10ಕ್ಕೆ ಏರಿಕೆಯಾಗಲಿದೆ ಎಂದು ಎಚ್ಚರಿಸಿದೆ.