ಕೈದಿ ಭೇಟಿಗೆ ಬಂದವರೆ ಅರೆಸ್ಟ್‌, ಒಂದು ತಿಂಗಳ ಅಂತರದಲ್ಲಿ ಇದು ಮೂರನೇ ಕೇಸ್‌, ಆಗಿದ್ದೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯ ಭೇಟಿಗೆ ಬಂದಿದ್ದ ಇಬ್ಬರು ಈಗ ಜೈಲುಪಾಲಾಗಿದ್ದಾರೆ. ಜೈಲು ಭದ್ರತೆಯನ್ನು ಕಣ್ಣಿಗೆ ಮಣ್ಣೆರಚಿ (smuggling) ತಮ್ಮ ಕಾರ್ಯ ಸಾಧನೆ ಮಾಡಬಹುದು ಅಂದುಕೊಂಡಿದ್ದವರೆ ಈಗ ಕಂಬಿ ಹಿಂದೆ ಸರಿಯುವಂತಾಗಿದೆ.

ಏನಿದು ಕೇಸ್‌?

Sigandur-Janthre-2026-scaled.

ಶಿವಮೊಗ್ಗದ ಕೇಂದ್ರ ಕಾರಾಗೃಹದ ವಿಚರಣಾಧೀನ ಕೈದಿ ಸೈಯದ್‌ ವಾಸೀಮ್‌ನ ಭೇಟಿಗೆ ಬಂದಿದ್ದ ಮೊಹಮದ್‌ ಅಕ್ಬರ್‌ ಮತ್ತು ಅಜ್ಗರ್‌ ಅಲಿ ಈಗ ಬಂಧಿತರಾಗಿದ್ದಾರೆ. ವಾಸೀಮ್‌ ಭೇಟಿ ವೇಳೆ ಆತನಿಗೆ ಕೊಡಲು ಹಣ್ಣು, ಬಟ್ಟೆಗಳನ್ನು ತಂದಿದ್ದರು. ಜೈಲು ಭದ್ರತಾ ಸಿಬ್ಬಂದಿ ಕೂಲಂಕಷವಾಗಿ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ.

ವಿಚಾರಣಾಧೀನ ಕೈದಿಗೆ ಕೊಡಲು ತಂದಿದ್ದ ಎರಡು ಪ್ಯಾಂಟುಗಳ ಸೊಂಟದ ಪಟ್ಟಿಯಲ್ಲಿ 6 ಗ್ರಾಂ ಗಾಂಜಾ ಸಿಕ್ಕಿದೆ. ಕೂಡಲೆ ಮೊಹಮದ್‌ ಅಕ್ಬರ್‌ ಮತ್ತು ಅಜ್ಗರ್‌ ಅಲಿಯನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ, ತುಂಗಾ ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ.ರಂಗನಾಥ್‌ ಅವರ ದೂರಿನ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಆರೋಪಿಗಳಿಂದ ಎರಡು ಪ್ಯಾಂಟು, ಗಾಂಜಾ, ಬೈಕ್‌, ಎರಡು ಮೊಬೈಲ್‌ಗಳು, ₹400 ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

two-arrested-in-Shivamogga-central-prison.

ಇಂತಹ ಕೃತ್ಯ ಇದೇ ಮೊದಲಲ್ಲ

ಡಿಸೆಂಬರ್‌ 29,2025: ವಿಚಾರಣಾಧೀನ ಕೈದಿ ದರ್ಶನ್‌ ಎಂಬಾತನ ಭೇಟಿಗೆ ಬಂದಿದ್ದ ತೇಜಸ್‌ ಪಟೇಲ್‌ ಎಂಬಾತ ಇದೇ ಮಾದರಿಯಲ್ಲಿ ಗಾಂಜಾ ಪೂರೈಸಲು ಯತ್ನಿಸಿದ್ದ. ಜೀನ್ಸ್‌ ಪ್ಯಾಂಟ್‌ನ ಸೊಂಟದ ಪಟ್ಟಿಯಲ್ಲಿ ಗಾಂಜಾ ಇರಿಸಿ ತಂದಿದ್ದ.

ಡಿಸೆಂಬರ್‌ 9, 2025: ಜೈಲಿನಲ್ಲಿದ್ದ ಅಶ್ಫಾಕ್‌ ಎಂಬಾತನ ಭೇಟಿಗೆ ಬಂದಿದ್ದ ಶಾಕೀಬ್‌ ಎಂಬಾತ ನಾಲ್ಕು ಜೀನ್ಸ್‌ ಪ್ಯಾಂಟ್‌ ತಂದಿದ್ದ. ಜೀನ್ಸ್‌ ಪ್ಯಾಂಟ್‌ನ ಸೊಂಟದ ಪಟ್ಟಿ, ಜಿಪ್‌ ಪಟ್ಟಿಯಲ್ಲಿ ಗಾಂಜಾ ಇರಿಸಲಾಗಿತ್ತು. ಜೈಲು ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಜೈಲನ ಒಳಗಿರುವ ಗಾಂಜಾ ಗಿರಾಕಿಗಳಿಗೆ ಗಾಂಜಾ ಪೂರೈಸಲು ತರಹೇವಾರಿ ಪ್ರಯತ್ನಗಳಾಗುತ್ತಿವೆ. ಆದರೆ ಆ ಪ್ರಯತ್ನಗಳೆಲ್ಲವು ವಿಫಲವಾಗುತ್ತಿರುವುದು ಸಮಾಧಾನದ ಸಂಗತಿ.

ಹೊರಗಿಂದ ಎಸೆಯುತ್ತಿದ್ದರು

ಈ ಮುಂಚೆ ಗಾಂಜಾವನ್ನು ಪ್ಯಾಕೆಟ್‌ ಮಾಡಿ, ಅದರ ಸುತ್ತಲು ಟೇಪ್‌ ಸುತ್ತಿ, ಜೈಲಿನ ಹೊರಭಾಗದಿಂದ ಒಳಗೆ ಎಸೆಯಲಾಗುತ್ತಿತ್ತು. ಇಂತಹ ಹಲವು ಪ್ಯಾಕೆಟ್‌ಗಳು ಜೈಲು ಸಿಬ್ಬಂದಿಗೆ ಸಿಕ್ಕಿದ್ದರಿಂದ ಈ ಪ್ರಯೋಗಗಳು ತಗ್ಗಿದ್ದವು. 2023ರಲ್ಲಿ ಜೈಲು ಕಾಂಪೌಂಡ್‌ ಪಕ್ಕದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ಸಿಬ್ಬಂದಿ ಚೇಸ್‌ ಮಾಡಿ ಹಿಡಿದಿದ್ದರು. ಅವರ ಬಳಿ ಗಾಂಜಾ, ಮೊಬೈಲ್‌ ಫೋನ್‌ಗಳು ಪತ್ತೆಯಾಗಿದ್ದವು.

Shimoga-Central-Jail-Building

ಜೈಲು ಸಿಬ್ಬಂದಿಯೇ ಪೂರೈಕೆದಾರನಾಗಿದ್ದ

ಜೈಲಿನ ಒಳಗೆ ಗಾಂಜಾ ಪೂರೈಕೆ ಸುಲಭವಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಜೈಲಿನೊಳಗೆ ಕೆಲಸ ಮಾಡುವವರನ್ನೆ ಪೂರೈಕೆದಾರರನ್ನಾಗಿ ಮಾಡಿಕೊಳ್ಳಲಾಗಿತ್ತು. 2025ರ ನವೆಂಬರ್‌ನಲ್ಲಿ ಜೈಲಿನ ಎಸ್‌ಡಿಎ ಸಾತ್ವಿಕ್‌ (25) ಬಳಿ ಗಾಂಜಾ ಪತ್ತೆಯಾಗಿತ್ತು. ತಪಾಸಣೆ ವೇಳೆ ಸಾತ್ವಿಕ್‌ನ ಒಳ ಉಡುಪಿನಲ್ಲಿ 170 ಗ್ರಾಂ ಗಾಂಜಾ ಸಿಕ್ಕಿತ್ತು.

Shivamogga-Central-Prison-FDA-Arrested

ಬಾಳೆ ಗೊನೆಯಲ್ಲು ಗಾಂಜಾ

ಜೈಲಿಗೆ ಪೂರೈಸಲಾಗಿದ್ದ ಬಾಳೆಗೊನೆಯ ದಿಂಡಿನ ಮಧ್ಯ ಭಾಗ ಕೊರೆದು ಅದರಲ್ಲಿ ಗಾಂಜಾ ಇರಿಸಲಾಗಿತ್ತು. ತಪಾಸಣೆ ವೇಳೆ ಇದು ಪತ್ತೆಯಾಗಿತ್ತು.

NDPS-Case-for-banana-supplier-to-shimoga-jail.

ಜೈಲು ಭದ್ರತೆ ನಿರ್ವಹಿಸುತ್ತಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್)‌ ಮತ್ತು ಕಾರಾಗೃಹ ಸಿಬ್ಬಂದಿಯ ಕಾರ್ಯಕ್ಷಮತೆಯಿಂದ ಮಾದಕ ವಸ್ತು ಜೈಲಿನೊಳಗೆ ಕಾಲಿಡುವುದು ತಪ್ಪಿದೆ. ಅಲ್ಲದೆ ಇಂತಹ ದುಸ್ಸಾಹಸಕ್ಕೆ ಕೈ ಹಾಕುವವರಿಗೆ ತಕ್ಕ ಪಾಠ ಕಲಿಸಿದಂತಾಗಿದೆ.

ಇದನ್ನೂ ಓದಿ » ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ? ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment