
ಶಿವಮೊಗ್ಗ ಲೈವ್.ಕಾಂ | SAGARA NEWS | 12 ಅಕ್ಟೋಬರ್ 2020
ಭಾನುವಾರ ಬೆಳಗಿನ ಜಾವದ ಜೋಡಿ ಕೊಲೆ ಸಾಗರ ತಾಲೂಕಿನಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿದೆ. ಬ್ಯಾಕೋಡಿನ ದಂಪತಿ ಹತ್ಯೆ ನೆನಪು ಹಸಿರಾಗಿರುವಾಗಲೆ ಈ ಜೋಡಿ ಕೊಲೆ ನಡೆದಿದೆ. ಸಾಗರ ಪೊಲೀಸರಿಗೆ ತಲೆನೋವು ಸೃಷ್ಟಿಸಿದ್ದರೆ, ಜನರು ತಲ್ಲಣಗೊಂಡಿದ್ದಾರೆ.
ಮೂರನೆ ಪ್ಯಾರಾ ಈ ಜಾಹೀರಾತಿನ ಕೆಳಗಿದೆ

ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸಕಸೆಕೊಡ್ಲು ಮಜರೆ ಗ್ರಾಮದಲ್ಲಿ ತಾಯಿ – ಮಗನ ಹತ್ಯೆ ಮಾಡಲಾಗಿದೆ. ಬಂಗಾರಮ್ಮ (62) ಮತ್ತು ಅವರ ಮಗ ಪ್ರವೀಣ್ ಕುಮಾರ್ (36) ಮೃತ ದುರ್ದೈವಿಗಳು. ಈ ಕೊಲೆ ಪ್ರಕರಣದಲ್ಲಿ ಗಮನಿಸಬೇಕಾದ ಅಂಶಗಳಿವು.

ಮನೆಯ ಮಹಡಿಗೆ ನುಗ್ಗಿ, ಅಲ್ಲಿಂದ ಕೆಳಗಿಳಿದು ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಪ್ರವೀಣ್ ಕುಮಾರ್ ಅವರ ಹತ್ಯೆ ಮಾಡಿದ್ದಾರೆ. ಪ್ರವೀಣ್ ಕುಮಾರ್ ಅವರು ಬೆನ್ನು ಮೇಲೆ ಮಾಡಿ ಬಿದ್ದಿದ್ದಾರೆ. ಅವರ ಮೃತದೇಹದ ಸುತ್ತಲು ನೆತ್ತರು ಹರಿದ್ದಿದ್ದು, ಕೊಲೆಯ ಭೀಕರತೆಗೆ ಸಾಕ್ಷಿಯಾಗಿತ್ತು.
ಮಗನ ಮೇಲಿನ ದಾಳಿ ತಡೆಯಲು ಮುಂದಾದ ತಾಯಿ ಬಂಗಾರಮ್ಮ ಅವರ ಮೇಲೂ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಸ್ಥಳದಲ್ಲೇ ಬಂಗಾರಮ್ಮ ಅವರು ಮೃತರಾಗಿದ್ದಾರೆ. ಪ್ರವೀಣ್ ಮೃತರಾದ ಕೊಠಡಿಯ ಹೊಸ್ತಿಲ ಮೇಲೆ ಬಂಗಾರಮ್ಮ ಅವರ ಮೃತದೇಹವಿತ್ತು.

ಪ್ರವೀಣ್ ಅವರು ರೋಹಿಣಿ ಅವರ ಜೊತೆ ವಿವಾಹವಾಗಿದ್ದರು. ತಾಯಿ – ಮಗನ ಹತ್ಯೆ ಮಾಡಿದ್ದ ದುಷ್ಕರ್ಮಿಗಳು, ರೋಹಿಣಿ ಅವರ ಬಾಯಿಗೆ ಪ್ಲಾಸ್ಟರ್ ಹಚ್ಚಿ, ಕೈ ಕಾಲು ಕಟ್ಟಿ ಕೂಗಾಡದಂತೆ ನೋಡಿಕೊಂಡಿದ್ದಾರೆ. 10 ತಿಂಗಳ ಮಗುವು ರೋಹಿಣಿ ಜೊತೆಗಿತ್ತು.
ಜೋಡಿ ಕೊಲೆ ಮಾಡಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಯಾವುದೆ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿಲ್ಲ ಎಂದು ತಿಳಿದು ಬಂದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಪ್ರವೀಣ್ ಕುಮಾರ್ ಮತ್ತು ಅವರ ತಾಯಿಯ ಹತ್ಯೆಯಾದ ಕೊಠಡಿಯಲ್ಲಿದ್ದ ಬೀರುಗಳ ಬಾಗಿಲು ಮುಚ್ಚಿದಂತೆಯೆ ಇದ್ದವು.

ಕೊಲೆ ಬಳಿಕ ದುಷ್ಕರ್ಮಿಯು ಪ್ರವೀಣ್ ಕುಮಾರ್ ಅವರ ಬಟ್ಟೆ ಹಾಕಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.
ಪ್ರವೀಣ್ ಅವರು ಜೇಬಿನಲ್ಲಿಟ್ಟದ್ದ 4 ಸಾವಿರ ನಗದು ಮತ್ತು ಮೊಬೈಲ್ ಫೋನ್ ಅನ್ನು ದುಷ್ಕರ್ಮಿ ಕದ್ದೊಯ್ದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಂಟಿ ಮನೆಯಾದ್ದರಿಂದ ಪ್ರಕರಣ ಬೆಳಕಿಗೆ ಬರುವುದು ತಡವಾಗಿದ್ದು, ಬೆಳಗ್ಗೆ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.
ಪ್ರವೀಣ್ ಕುಮಾರ್ ಅವರಿಗೆ ಅರ್ಧ ಎಕರೆ ಗದ್ದೆ ಇತ್ತು. ಕೃಷಿ ಮಾಡಿ ಜೀವನ ನಡೆಸುತ್ತಿದ್ದರು.
ಜೋಡಿ ಕೊಲೆ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ತನಿಖೆಗೆ ತಂಡ ರಚಿಸಲಾಗಿದೆ. ಇನ್ಸ್ ಪೆಕ್ಟರ್ಗಳಾದ ಕುಮಾರಸ್ವಾಮಿ, ಅಶೋಕ್ ಕುಮಾರ್, ಅಭಯ್ ಪ್ರಕಾಶ್, ಭರತ್, ಸುಜಾತಾ ಅವರನ್ನೊಳಗೊಂಡ ತಂಡ ಪ್ರಕರಣದ ತನಿಖೆ ಆರಂಭಿಸಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com





