ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 3 ಫೆಬ್ರವರಿ 2022
ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಎದುರಿನ ರಸ್ತೆಯಲ್ಲಿರುವ ಸುಲ್ತಾನ್ ಮಾರ್ಕೆಟ್’ನಲ್ಲಿ ನಡುರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಸುಲ್ತಾನ್ ಮಾರ್ಕೆಟ್’ನ ಗುಜರಿ ಅಂಗಡಿಗಳ ಮುಂದೆ ಇಡಲಾಗಿದ್ದ ಟಯರ್ ಮತ್ತು ಇತರೆ ಗುಜರಿಗೆ ವಸ್ತುಗಳು ಧಗಧಗ ಹೊತ್ತಿ ಉರಿದಿವೆ. ಸ್ಥಳೀಯರು ಇದನ್ನು ಗಮನಿಸಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಕೂಡಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳದ ಡಿಎಫ್ಒ ಅಶೋಕ್ ಕುಮಾರ್ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಅಗ್ನಿ ಅವಘಡಕ್ಕೆ ಕಾರಣವೇನು?
ಬೆಂಕಿ ಹೊತ್ತುಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಗುಜರಿ ವಸ್ತುಗಳು ಇರಿಸಿದ್ದ ಸ್ಥಳದ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್’ಫಾರ್ಮರ್ ಇದೆ. ಇದರಿಂದ ಕಿಡಿ ಬಿದ್ದು ಬೆಂಕಿ ಹೊತ್ತುಕೊಂಡಿರುಬಹುದು ಅಥವಾ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಬಗ್ಗೆ ಶಂಕೆ ಇದೆ. ಈ ಕುರಿತು ತನಿಖೆ ನಡೆಯುತ್ತಿದೆ.
ತಪ್ಪಿತು ದೊಡ್ಡ ಅನಾಹುತ
ಮಾರ್ಡನ್ ಟಾಕೀಸ್ ಹಿಂಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಗುಜರಿ ಅಂಗಡಿಗಳಿವೆ. ಗುಜರಿ ವಸ್ತುಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ರಸ್ತೆಗಳಲ್ಲಿ ಇಡಲಾಗುತ್ತಿದೆ. ಇದರಿಂದ ರಸ್ತೆಗಳಲ್ಲಿ ವಾಹನಗಳು ಮತ್ತು ಜನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಇಂತಹ ಅವಘಡ ಸಂಭವಿಸಿದರೆ, ಬೆಂಕಿಯು ಅತ್ಯಂತ ವೇಗವಾಗಿ ವ್ಯಾಪಿಸಿಕೊಳ್ಳಲು ಅನುವಾಗುತ್ತದೆ. ಕಳೆದ ರಾತ್ರಿ ಅಗ್ನಿಶಾಮಕ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ದೊಡ್ಡ ಅನಾಹುತ ತಪ್ಪಿದೆ.
ಮೇಯರ್ ಮಾತಿಗೂ ಕ್ಯಾರೆ ಅನ್ನಲಿಲ್ಲ
ಗುಜರಿ ವಸ್ತುಗಳನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಮೇಯರ್ ಸುನೀತಾ ಅಣ್ಣಪ್ಪ ಅವರು ಈ ಹಿಂದೆಯೇ ಸೂಚಿಸಿದ್ದರು. ಅಧಿಕಾರ ವಹಿಸಿಕೊಂಡ ಆರಂಭದಲ್ಲೆ ಮೇಯರ್ ಸುನೀತಾ ಅಣ್ಣಪ್ಪ ಅವರು ಇಲ್ಲಿನ ಗುಜರಿ ಅಂಗಡಿಗಳಿಗೆ ಭೇಟಿ ನೀಡಿ, ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದ್ದರು. ಆದರೂ ಇಲ್ಲಿ ಪರಿಸ್ಥಿತಿ ಬದಲಾಗಿಲ್ಲ.
ಇದನ್ನೂ ಓದಿ | ಶಿವಮೊಗ್ಗ ಮಾರ್ಡನ್ ಟಾಕೀಸ್ ಹಿಂಭಾಗದ ರಸ್ತೆಗೆ ಮೇಯರ್ ದಿಢೀರ್ ಭೇಟಿ, ವ್ಯಾಪಾರಿಗಳಿಗೆ ಒಂದು ವಾರದ ಗಡುವು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422