SHIVAMOGGA LIVE NEWS | 30 MAY 2024
SHIMOGA : ಹೊಸಮನೆ ಬಡಾವಣೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಮೇಲೆ ದಾಳಿ (Attack) ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನೆ ಬೆನ್ನಿಗೆ ಸ್ಥಳಕ್ಕೆ ಶಾಸಕರು ಭೇಟಿ ನೀಡಿದ್ದರು. ಗೃಹ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮಧ್ಯೆ ಪೊಲೀಸ್ ಚೌಕಿಗಾಗಿ ಬಡಾವಣೆಯ ಮಾಜಿ ಕಾರ್ಪೊರೇಟರ್ ಆಗ್ರಹಿಸಿದ್ದಾರೆ.
ಬೆಳಗ್ಗೆಯಿಂದ ಏನೇನಾಯ್ತು ಬೆಳವಣಿಗೆ?
ಕಳೆದ ರಾತ್ರಿ ಹೊಸಮನೆ ಬಡಾವಣೆಯ ಮೂರನೇ ಅಡ್ಡರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ವಾಹನಗಳು, ಮನೆ ಮುಂದಿನ ವಸ್ತುಗಳ ಮೇಲೆ ದಾಳಿ ನಡೆಸಲಾಗಿತ್ತು. ಎರಡು ಕಾರು, ಎರಡು ಆಟೋ, ಒಂದು ಬೈಕ್ ಮೇಲೆ ದಾಳಿ ನಡೆಸಲಾಗಿದೆ. ಮನೆ ಮುಂದೆ ಇದ್ದ ಡ್ರಮ್ ಒಂದಕ್ಕೆ ಮಚ್ಚಿನಲ್ಲಿ ಹೊಡೆಯಲಾಗಿದೆ.
ಹೌಹಾರಿದ ಶಾಸಕ ಚನ್ನಬಸಪ್ಪ
ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ರಾತ್ರಿ ವೇಳೆ ಯುವಕರ ಗುಂಪು ಮದ್ಯ ಸೇವಿಸುವ ಅಡ್ಡೆಯೊಂದನ್ನು ಸ್ಥಳೀಯರು ತೋರಿಸಿದರು. ಅದನ್ನು ಕಂಡು ಒಂದೆರಡು ಕ್ಷಣ ಶಾಸಕ ಚನ್ನಬಸಪ್ಪ ಹೌಹಾರಿದರು.
ಹೊಸಮನೆ ಭಾಗದಲ್ಲಿ ಕಳೆದ ರಾತ್ರಿ ನಡೆದ ಘಟನೆ ಗಾಂಜಾ ಸೇವನೆಯಿಂದ ಆಗಿದ್ದು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಯಾವ ವಸ್ತು ನಗರದಲ್ಲಿ ದೊರೆಯಬಾರದೊ ಅದು ಈಗ ವ್ಯವಸ್ಥಿತವಾಗಿ ಕೈಗೆಟುಕುತ್ತಿದೆ. ಗಾಂಜಾ ಮಟ್ಟ ಹಾಕುತ್ತೇವೆ ಅನ್ನುತ್ತಾರೆ. ಅದರೆ ಹೊಸಮನೆಯಲ್ಲಿ ಹೇಗೆ ಸಿಗುತ್ತಿದೆ? ಮಾತು ಎತ್ತಿದರೆ ಕಾನೂನು ಸುವ್ಯವಸ್ಥೆ ಇದೆ ಎನ್ನುತ್ತಾರೆ. ಸಚಿವರು, ಪೊಲೀಸ್ ಅಧಿಕಾರಿಗಳು ಒಮ್ಮೆ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಜನರೊಂದಿಗೆ ಮಾತನಾಡಲಿ. ಈ ರೀತಿಯ ಗೂಂಡ ವರ್ತನೆಗೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ರಕ್ಷಣ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎಲ್ಲೆಂದರಲ್ಲಿ ಕೊಲೆಗಳು ನಡೆಯುತ್ತಿವೆ. ತಲ್ವಾರುಗಳನ್ನು ಕಾಣಿಸುತ್ತಿವೆ.ಎಸ್.ಎನ್.ಚನ್ನಬಸಪ್ಪ, ಶಾಸಕ
ಜಿಲ್ಲಾ ರಕ್ಷಣಾಧಿಕಾರಿ ಭೇಟಿ
ದುಷ್ಕರ್ಮಿಗಳು ದಾಳಿ ನಡೆಸಿದ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿದ್ದರು. ಸ್ಥಳೀಯರಿಂದ ಘಟನೆ ಕುರಿತು ಮಾಹಿತಿ ಪಡೆದರು. ಅಲ್ಲದೆ ತುರ್ತು ಸಂದರ್ಭದಲ್ಲಿ 112 ನಂಬರ್‌ಗೆ ಕರೆ ಮಾಡುವಂತೆ ತಿಳಿಸಿದರು.
ಹೋಮ್ ಮಿನಿಸ್ಟರ್ ಗರಂ
ಗೃಹ ಸಚಿವ ಜಿ.ಪರಮೇಶ್ವರ್ ಅವರು ಇವತ್ತು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಹೊಸಮನೆ ಘಟನೆ ಮತ್ತು ಶಿವಮೊಗ್ಗದಲ್ಲಿ ಪದೇ ಪದೆ ಇಂತಹ ಘಟನೆ ನಡೆಯುತ್ತಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದರು. ಪ್ರತಿಕ್ರಿಯೆ ನೀಡಿದ ಜಿ.ಪರಮೇಶ್ವರ್, ‘ನಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಗೂಂಡಾಗಳಿಗೆ ನಮ್ಮ ಕಾಲದಲ್ಲಿ ಅವಕಾಶವಿಲ್ಲ’ ಎಂದು ತಿಳಿಸಿದರು.
ಪೊಲೀಸ್ ಚೌಕಿಗೆ ಒತ್ತಾಯ
ಇನ್ನು, ಹೊಸಮನೆ ಬಡಾವಣೆಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಚೌಕಿ ಸ್ಥಾಪಿಸಬೇಕು ಎಂದು ಮಾಜಿ ಕಾರ್ಪೊರೇಟರ್ ರೇಖಾ ರಂಗನಾಥ್ ಮನವಿ ಸಲ್ಲಿಸಿದರು. ಹೊಸಮನೆ ಬಡಾವಣೆ ಮತ್ತು ಶರಾವತಿ ನಗರ ಬಡಾವಣೆಗಳಲ್ಲಿ 26 ಸಾವಿರ ಜನಸಂಖ್ಯೆ ಇದೆ. ಇವೆರಡು ಬಡಾವಣೆಗಳ ಮಧ್ಯೆ ಪೊಲೀಸ್ ಚೌಕಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ – ಬೆಳ್ಳಂಬೆಳಗ್ಗೆ ಟೀ ಕುಡಿದು ಹತ್ತೇ ನಿಮಿಷದಲ್ಲಿ ವಾಪಾಸಾದ ಗಾರೆ ಕೆಲಸಗಾರನಿಗೆ ಕಾದಿತ್ತು ಆಘಾತ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200