ಶಿವಮೊಗ್ಗ: ಬಿ.ಹೆಚ್.ರಸ್ತೆಯಲ್ಲಿರುವ ಪ್ರಸಿದ್ಧ ಭೀಮಾ ಗೋಲ್ಡ್ ಶೋರೂಮ್‌ಗೆ ಬಂದ ಮಹಿಳೆಯೊಬ್ಬರು, ಮಾಂಗಲ್ಯ ಸರವನ್ನು (gold chain) ಅದಲು ಬದಲು ಮಾಡಿ ಸುಮಾರು ₹6.32 ಲಕ್ಷ ಮೌಲ್ಯದ ಚಿನ್ನದ ಸರ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಫೆಬ್ರವರಿ 18ರ ಬೆಳಗ್ಗೆ ಘಟನೆ ನಡೆದಿದ್ದು, ಮ್ಯಾನೇಜರ್ ಸತೀಶ್ ಬಿ.ಎನ್ ಅವರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶೋ ರೂಂನಲ್ಲಿ ಆಗಿದ್ದೇನು?
ಸುಮಾರು ಒಂದು ವರ್ಷದ ಮಗುವಿನೊಂದಿಗೆ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶೋರೂಮ್‌ಗೆ ಬಂದ 32 ರಿಂದ 34 ವರ್ಷದ ಮಹಿಳೆ, ಚಿನ್ನದ ಸರ ತೋರಿಸುವಂತೆ ಸೇಲ್ಸ್ ಮ್ಯಾನ್‌ಗೆ ಕೇಳಿದ್ದಾರೆ. ಸೇಲ್ಸ್‌ಮನ್ ಎರಡು ಎಳೆಯ ಬಂಗಾರದ ಮಾಂಗಲ್ಯ ಸರವಿದ್ದ ಟ್ರೈ ಅನ್ನು ತೋರಿಸಿದಾಗ, ಮಹಿಳೆಯು ಅದನ್ನು ನೋಡುವಂತೆ ನಟಿಸುತ್ತಾ ಸೇಲ್ಸ್ ಮ್ಯಾನ್ ಗಮನ ಬೇರೆಡೆ ಸೆಳೆದಿದ್ದಾರೆ ಎಂದು ಆರೋಪಿಸಲಾಗಿದೆ.
ತನಗೆ ಇನ್ನೊಂದು ಮಾಂಗಲ್ಯ ಸರದ ಟ್ರೈ ತೋರಿಸುವಂತೆ ಕೇಳಿದ ಮಹಿಳೆ, ಆ ಸಮಯದಲ್ಲೇ ತನ್ನ ಕೈಯಲ್ಲಿದ್ದ ನಕಲಿ ಸರವನ್ನು ಟ್ರೈನಲ್ಲಿ ಇಟ್ಟು, ಅಸಲಿ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಸಂಜೆ ಸ್ಟಾಕ್ ಪರಿಶೀಲನೆ ನಡೆಸಿದಾಗ ಎರಡು ಎಳೆಯ ಬಂಗಾರದ ಮಾಂಗಲ್ಯ ಸರ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಶೋರೂಮ್‌ನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ₹6,32,514 ಮೌಲ್ಯದ 40 ಗ್ರಾಂ 710 ಮಿಲಿ ತೂಕದ ಬಂಗಾರದ ಸರ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ತಡರಾತ್ರಿ 2 ಗಂಟೆಗೆ ಕೇಳಿತು ಸ್ಪೋಟದ ಶಬ್ದ, ಮನೆಯಿಂದ ಹೊರ ಬಂದಾಗ ಕಾಣಿಸ್ತು ಬೆಚ್ಚಿಬೀಳುವ ದೃಶ್ಯ

About The Editor
ನಿತಿನ್ ಆರ್.ಕೈದೊಟ್ಲು






