ಒಂದೇ ಒಂದು ವಾಟ್ಸಪ್‌ ಗ್ರೂಪ್‌ನಿಂದಾಗಿ ₹31.35 ಲಕ್ಷ ಕಳೆದುಕೊಂಡ ನಿವೃತ್ತ ನೌಕರ, ಆಗಿದ್ದೇನು?

ಶಿವಮೊಗ್ಗ: ಆನ್‌ಲೈನ್ ಶೇರ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಶೇ.200 ಕ್ಕೂ ಹೆಚ್ಚು ಲಾಭಾಂಶ ನೀಡುವುದಾಗಿ ನಂಬಿಸಿ ನಿವೃತ್ತ ನೌಕರರೊಬ್ಬರಿಗೆ ₹31.35 ಲಕ್ಷ ರೂಪಾಯಿ ವಂಚಿಸಲಾಗಿದೆ.

ನಿವೃತ್ತ ನೌಕರರ ಮೊಬೈಲ್ ಸಂಖ್ಯೆಗೆ ಆನ್‌ಲೈನ್ ಟ್ರೇಡಿಂಗ್ ಕುರಿತು ವಾಟ್ಸಾಪ್‌ ಮೆಸೇಜ್ ಬಂದಿತ್ತು. ಬಳಿಕ ನಿವೃತ್ತ ನೌಕರರನ್ನು ವಾಟ್ಸಾಪ್ ಗ್ರೂಪ್‌ಗೆ ಸೇರಿಸಲಾಗಿತ್ತು. ಈ ಗ್ರೂಪ್‌ನಲ್ಲಿ ನುವಾಮಾ ಅಸ್ಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಗಳಿಸಬಹುದು ಎಂದು ಪ್ರಚಾರ ಮಾಡಲಾಗಿತ್ತು. ಅಲ್ಲದೆ ಗ್ರೂಪ್‌ನಲ್ಲಿದ್ದ ಇತರ ಸದಸ್ಯರು ತಾವು ಪಡೆದಿದ್ದ ಲಾಭದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

Shimogga-Cyber-Crime-CEN-Police-Station

ಇದನ್ನು ನಿಜ ಎಂದು ನಂಬಿದ ನಿವೃತ್ತ ನೌಕರ ಹೂಡಿಕೆ ಮಾಡಿದ್ದರು. ಆಗಸ್ಟ್ 6 ರಿಂದ ಸೆಪ್ಟೆಂಬರ್ 16 ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹31,35,000 ಹಣವನ್ನು ವಂಚಕು ಸೂಚಿಸಿದ ಖಾತೆಗಳಿಗೆ ವರ್ಗಾಯಿಸಿದ್ದರು. ಸೆಪ್ಟೆಂಬರ್ 16 ರಂದು ತಾವು ಹೂಡಿಕೆ ಮಾಡಿದ ಹಣ ಹಾಗೂ ಬಂದಿದ್ದ ಲಾಭಾಂಶವನ್ನು ಹಿಂಪಡೆಯಲು ಯತ್ನಿಸಿದ್ದರು. ನಿಮಗೆ ಶೇ.200 ಕ್ಕೂ ಹೆಚ್ಚು ಲಾಭ ಬಂದಿರುವುದರಿಂದ ಮೊದಲು ಶೇ.20 ರಷ್ಟು ತೆರಿಗೆ ಹಾಗೂ ಸರ್ವಿಸ್ ಫೀಸ್ ಪಾವತಿಸಬೇಕು, ಇಲ್ಲದಿದ್ದರೆ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ  ಎಂದು ತಿಳಿಸಲಾಯಿತು. ಆಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.