ಉದ್ಯಮಿಗೆ ಲಕ್ಷ ಲಕ್ಷ ವಂಚನೆ, ಗೂಗಲ್‌ನಲ್ಲಿ ಸಿಕ್ಕ ನಂಬರ್‌ಗೆ ಸಂಪರ್ಕಿಸಿದ್ದೇ ಅವಾಂತರಕ್ಕೆ ಕಾರಣ, ಹೇಗದು?

ಶಿವಮೊಗ್ಗ: ಗೂಗಲ್‌ನಲ್ಲಿ ಕಂಪನಿಯೊಂದರ ಹೆಲ್ಪ್‌ಲೈನ್ ಸಂಖ್ಯೆ ಹುಡುಕಿ ಸಂಪರ್ಕಿಸಿದ ಉದ್ಯಮಿಯೊಬ್ಬರಿಗೆ ಕಡಿಮೆ ದರದಲ್ಲಿ ಕಬ್ಬಿಣದ ಸರಳು ಪೂರೈಸುವುದಾಗಿ ನಂಬಿಸಿ ₹8.02 ಲಕ್ಷ ವಂಚಿಸಲಾಗಿದೆ.

ಉದ್ಯಮಿಯೊಬ್ಬರಿಗೆ ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಬ್ಬಿಣದ ಸರಳುಗಳ ಅಗತ್ಯವಿತ್ತು. ಗೂಗಲ್‌ನಲ್ಲಿ ಕಂಪನಿಯೊಂದರ ವೆಬ್‌ಸೈಟ್‌ಗಾಗಿ ಹುಡುಕಿದ್ದರು. ಅಲ್ಲಿ ಸಿಕ್ಕಿದ್ದ ಟೋಲ್ ಫ್ರೀ ಸಂಖ್ಯೆಗೆ ವಾಟ್ಸಾಪ್ ಮೂಲಕ ಸಂಪರ್ಕಿಸಿದ್ದರು. ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿಗಳು ತಾವು ಬಿರ್ಲಾ ಎಸ್ಟೇಟ್ ಕಂಪನಿಯ ಪ್ರತಿನಿಧಿಗಳು ಎಂದು ಪರಿಚಯಿಸಿಕೊಂಡಿದ್ದರು. ಕಡಿಮೆ ದರದಲ್ಲಿ ಕಬ್ಬಿಣದ ಸರಳುಗಳನ್ನು ಪೂರೈಸುವುದಾಗಿ ನಂಬಿಸಿದ್ದರು.

SMS-Fraud-Shimoga-CEN-Police-Station.

ಉದ್ಯಮಿ ತಮಗೆ 15 ಟನ್ ಕಬ್ಬಿಣದ ಸರಳುಗಳು ಬೇಕು ಎಂದು ತಿಳಿಸಿದ್ದರು. ಬಳಿಕ ಸೆಪ್ಟೆಂಬರ್ 22 ರಂದು ವಂಚಕರು 15 ಟನ್ ಕಬ್ಬಿಣದ ಸರಳಿಗೆ ಒಟ್ಟು ₹8,02,500 ಮೊತ್ತದ ನಕಲಿ ಇನ್‌ವಾಯ್ಸ್ ಬಿಲ್ ಅನ್ನು ವಾಟ್ಸಾಪ್‌ಗೆ ಕಳುಹಿಸಿದ್ದರು. ಜೊತೆಗೆ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿ, ಮುಂಗಡವಾಗಿ ₹4.50 ಲಕ್ಷ ಪಾವತಿಸುವಂತೆ ಸೂಚಿಸಿದ್ದರು. ಅದರಂತೆ ಉದ್ಯಮಿಯು ಹಣವನ್ನು ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದರು. ನಂತರ ಸೆಪ್ಟೆಂಬರ್ 23 ರಂದು ಮತ್ತೆ ಕರೆ ಮಾಡಿದ ವಂಚಕರು, ಬಾಕಿ ಹಣ ಪಾವತಿಸಿದರೆ ತಕ್ಷಣವೇ ಕಬ್ಬಿಣದ ಸರಳುಗಳನ್ನು ಲಾರಿಯಲ್ಲಿ ಕಳುಹಿಸಿ ಕೊಡಲಾಗುವುದು ಎಂದು ಹೇಳಿದ್ದರು.

ಇದನ್ನು ನಂಬಿ ಉದ್ಯಮಿಯವರು ಉಳಿದ ₹3,52,500 ಹಣವನ್ನೂ ಆರ್‌ಟಿಜಿಎಸ್ ಮಾಡಿದ್ದರು. ಹಣ ಪಾವತಿಸಿದರೂ ಸರಳುಗಳನ್ನು ಕಳುಹಿಸದ ವಂಚಕರು, ತೆರಿಗೆ ಪಾವತಿಸಲು ಇನ್ನು ₹91,500 ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದರಿಂದ ಅನುಮಾನಗೊಂಡ ಪರಿಶೀಲಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.