ಬ್ಯಾಂಕ್‌ ಮ್ಯಾನೇಜರ್‌ ಫೋನ್‌ ಮಾಡಿದ ನಂತರ ಶಿವಮೊಗ್ಗದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

ಶಿವಮೊಗ್ಗ: ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ, ನವೀಕರಿಸಿಕೊಡುತ್ತೇವೆ ಎಂದು ನಂಬಿಸಿ ಕೆನರಾ ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಕರೆ ಮಾಡಿದ ವಂಚಕರು, ಹಿರಿಯ ನಾಗಿರಕರೊಬ್ಬರಿಗೆ ₹2.74 ಲಕ್ಷ ವಂಚನೆ ಮಾಡಿದ್ದಾರೆ.

ಶಿವಮೊಗ್ಗದ ಹಿರಿಯ ನಾಗರಿಕರೊಬ್ಬರಿಗೆ ಅಕ್ಟೋಬರ್ 2 ರಂದು ಬೆಳಿಗ್ಗೆ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಕೆನರಾ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಅದನ್ನು ರಿನಿವಲ್ ಮಾಡಿಕೊಡುತ್ತೇವೆ. ಅದಕ್ಕಾಗಿ ನಿಮ್ಮ ಮೊಬೈಲ್‌ಗೆ ಬರುವ ಓಟಿಪಿ ಸಂಖ್ಯೆ ತಿಳಿಸಿ ಎಂದು ನಂಬಿಸಿದ್ದ. ಆತನ ಮಾತನ್ನು ನಿಜ ಎಂದು ನಂಬಿದ ಹಿರಿಯ ನಾಗರಿಕ ತಮ್ಮ ಮೊಬೈಲ್‌ಗೆ ಬಂದ ಓಟಿಪಿ ಸಂಖ್ಯೆಯನ್ನು ತಿಳಿಸಿದ್ದರು.

SMS-Fraud-Shimoga-CEN-Police-Station.

ಇದೇ ರೀತಿ ಒಟ್ಟು 6 ಬಾರಿ ಓಟಿಪಿ ಪಡೆದುಕೊಂಡಿದ್ದರು. ಬಳಿಕ ಹಿರಿಯ ನಾಗರಿಕನ ಬ್ಯಾಂಕ್ ಖಾತೆಯಿಂದ ₹51,264, ₹50,597, ₹40,447, ₹50,597, ₹50,597 ಹಾಗೂ ₹30,758 ಸೇರಿ ಒಟ್ಟು ₹2,74,291 ಹಣ ಕಡಿತಗೊಂಡಿರುವ ಬಗ್ಗೆ ಮೊಬೈಲ್‌ಗೆ ಸಂದೇಶಗಳು ಬಂದಿವೆ. ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ, ವಂಚನೆಗೊಳಗಾಗಿರುವುದು ಗೊತ್ತಾಗಿದೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.