ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಸರ್ಕಾರಿ ಕಚೇರಿಗಳ ನಕಲಿ ದಾಖಲೆ ಹಾಗೂ ಸೀಲ್‌ಗಳನ್ನು ಸೃಷ್ಟಿಸಿ ವಂಚನೆ ಎಸಗಿದ್ದ ಆರೋಪಿಗೆ ನ್ಯಾಯಾಲಯ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ನಗರದ ಎ.ಎನ್.ಕೆ ರಸ್ತೆಯ ಗೋವಿಂದಪ್ಪ ಕಾಂಪ್ಲೆಕ್ಸ್‌ನಲ್ಲಿರುವ ಇಮೇಜ್ ಟೆಕ್ನಾಲಜೀಸ್ ಶಾಪ್‌ನಲ್ಲಿ ಆರೋಪಿತ ವಿಷ್ಣುಭಕ್ತ, ಸರ್ಕಾರಿ ಕಚೇರಿಗಳ ನಕಲಿ ದಾಖಲೆ ಮತ್ತು ವಿವಿಧ ಇಲಾಖೆಗಳ ಮೊಹರುಗಳನ್ನು ಅಕ್ರಮವಾಗಿ ಸೃಷ್ಟಿಸಿದ್ದನು. ಈ ನಕಲಿ ದಾಖಲೆಗಳನ್ನು ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಿಗೆ ಸಲ್ಲಿಸಿ ವಂಚನೆ ಎಸಗಿದ್ದನು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಹಿಂದಿನ ಡಿವೈಎಸ್ಪಿ ಪ್ರಶಾಂತ್ ಮುನ್ನೊಳಿ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಧೀಶ ಯಶವಂತ ಕುಮಾರ್ ಅವರು, ಆರೋಪಿತನಿಗೆ 5 ವರ್ಷ ಕಠಿಣ ಕಾರಾಗೃಹವಾಸ ಹಾಗೂ ₹17,000 ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು.