ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ನಗರದ ಗೋಪಿ ವೃತ್ತದಲ್ಲಿ ಸಂಕಲ್ಪ ಶಿವಮೊಗ್ಗದ ವತಿಯಿಂದ ಸ್ವದೇಶಿ ಮಂತ್ರ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾತ್ರಿ 1 ಗಂಟೆವರೆಗೆ ದೊಡ್ಡ ಸಂಖ್ಯೆಯ ಜನರು ಕಾರ್ಯಕ್ರಮ ವೀಕ್ಷಿಸಿ, ಖುಷಿಪಟ್ಟರು.

ನಾಡಗೀತೆಯೊಂದಿಗೆ ಉದ್ಘಾಟನೆ
ನಿವೃತ್ತ ಯೋಧ ಸುಭಾಷ್ ಚಂದ್ರ ತೇಜಸ್ವಿ ಅವರು ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಭಾರತೀಯ ಸೇನೆಯ ನಿವೃತ್ತ ಯೋಧರನ್ನು ಗೌರವಿಸಿ ಕಾರ್ಯಕ್ರಮ ನಡೆಯಿತು.
ಸಮನ್ವಯ ಸಂಸ್ಥೆಯ ಜೊತೆಗೆ ಉಚಿತ ಸೈನಿಕ ತರಬೇತಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಯುವ ಪೀಳಿಗೆಯನ್ನು ವೃತ್ತಿಪರ ಶಿಕ್ಷಣದ ಮೂಲಕ ದೇಶ ಸೇವೆ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮ ಮುಂದಿನ ಪೀಳಿಗೆಗಾಗಿ ನಿರಂತರವಾಗಿ ನಡೆಯಬೇಕು.
– ಸುಭಾಷ್ ಚಂದ್ರ ತೇಜಸ್ವಿ, ನಿವೃತ್ತ ಯೋಧ
ಭಾರತದಲ್ಲಿ ಜಿಲ್ಲೆಗೊಂದು ಆಹಾರ ಸಂಸ್ಕೃತಿ, ಭಾಷಾ, ಧಾರ್ಮಿಕ, ಸಾಂಸ್ಕೃತಿಕ ವೈವಿಧ್ಯತೆ ಇದೆ. ಇಷ್ಟೊಂದು ಭಿನ್ನತೆ ನಡುವೆ ಜಗತ್ತಿನಲ್ಲಿ ಇಷ್ಟು ಸುದೀರ್ಘ ಅವಧಿ ಸ್ವಾತಂತ್ರವಾಗಿರುವ ಯಾವುದೇ ದೇಶವನ್ನು ಕಾಣಲು ಸಾಧ್ಯವಿಲ್ಲ. ಸ್ವದೇಶಿ ಮಂತ್ರ ಕಾರ್ಯಕ್ರಮವನ್ನು ಕಡಿಮೆ ಅವಧಿಯಲ್ಲಿ ರೂಪಿಸಲಾಗಿದೆ. ಇಷ್ಟೊಂದು ಜನ ಸೇರಿರುವುದು ಖುಷಿ ನೀಡಿದೆ.
– ಶ್ರೀ ಮರಳುಸಿದ್ಧ ಸ್ವಾಮೀಜಿ, ಬಸವಕೇಂದ್ರ
ಜನಮುಖಿ ಕೆಲಸಗಳನ್ನು ಮಾಡುವ ಉದ್ದೇಶದಿಂದ ಸಂಕಲ್ಪ ಶಿವಮೊಗ್ಗ ಸಂಸ್ಥೆ ಹುಟ್ಟಿಕೊಂಡಿದೆ. 40ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಸೇರಿ ಸ್ವದೇಶಿ ಮಂತ್ರ ಕಾರ್ಯಕ್ರಮ ಆಯೋಜಿಸಿವೆ. ನವೆಂಬರ್ ತಿಂಗಳಲ್ಲಿ ವೈಭವದ ರಾಜ್ಯೋತ್ಸವ ಆಚರಿಸುವ ಯೋಚನೆ ಇದೆ.
– ಸಿ.ಎಸ್.ಷಡಾಕ್ಷರಿ, ಸಂಚಾಲಕ, ಸಂಕಲ್ಪ ಶಿವಮೊಗ್ಗ
ಗಾಯನ, ನೃತ್ಯ, ಮ್ಯಾಜಿಕ್ ಶೋ
ಶಿವಮೊಗ್ಗ ಜಿಲ್ಲೆಯ ಕಲಾವಿದರು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಜನರಲ್ಲಿ ದೇಶಭಕ್ತಿಯನ್ನು ಮೂಡಿಸಿದರು. ಇದರೊಂದಿಗೆ ವಿವಿಧ ನಾಟ್ಯ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು. ಅಲ್ಲದೆ, ಸ್ಥಳದಲ್ಲಿದ್ದ ಜನರನ್ನು ರಂಜಿಸುವ ಸಲುವಾಗಿ ವಿಶೇಷ ಮ್ಯಾಜಿಕ್ ಶೋ ಅನ್ನು ಸಹ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ನಡುರಾತ್ರಿ ಪಟಾಕಿ ಸಿಡಿಸಿ ದೇಶದ 80ನೇ ಸ್ವಾತಂತ್ರ ದಿನವನ್ನು ಸಂಭ್ರಮಿಸಲಾಯಿತು. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಇದ್ದರು. ಇಲ್ಲಿವೆ ಫೋಟೊಗಳು