ಶಿವಮೊಗ್ಗ: ತಾಯಿಯ ಅನಾರೋಗ್ಯದ ಸಮಸ್ಯೆಯನ್ನು ಬಗೆಹರಿಸುವುದಾಗಿ ನಂಬಿಸಿ ಆನ್‌ಲೈನ್ ಜ್ಯೋತಿಷಿಯೊಬ್ಬರು ನಗರದ ಖಾಸಗಿ ಆಸ್ಪತ್ರೆಯ ನರ್ಸ್ ಒಬ್ಬರಿಗೆ ಬರೋಬ್ಬರಿ ₹1.84 ಲಕ್ಷ ವಂಚಿಸಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗದ ನರ್ಸ್ ಒಬ್ಬರು ಇನ್‌ಸ್ಟಾಗ್ರಾಮ್ ಆಪ್ ಬಳಸುತ್ತಿದ್ದಾಗ ‘ಸಿಂಗದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯಾಲಯ’ದ ಜಾಹೀರಾತು ಕಂಡುಬಂದಿತ್ತು. ಅದರಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ಶ್ರೀನಿವಾಸ ಭಟ್ ಎಂಬಾತ ಮಾತನಾಡಿದ್ದ. ತಾಯಿಯ ಅನಾರೋಗ್ಯದ ಬಗ್ಗೆ ನರ್ಸ್ ವಿವರಿಸಿದಾಗ, ಸಮಸ್ಯೆ ಪರಿಹರಿಸಲು ಪೂಜೆ ಮಾಡಬೇಕೆಂದು ಹೇಳಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಳ್ಳಲಾರಂಭಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪೂಜೆ ನೆಪದಲ್ಲಿ ಹಣ ಹಾಕಿಸಿಕೊಂಡ
ಮೊದಲಿಗೆ ಪೂಜೆಯ ಹೆಸರಲ್ಲಿ ₹501 ಹಾಗೂ ನಂತರ ತಾಯಿಗೆ ಯಾರೋ ಮಾಟ-ಮಂತ್ರ ಮಾಡಿಸಿದ್ದಾರೆ ಎಂದು ಹೆದರಿಸಿ ಪರಿಹಾರದ ಪೂಜೆಗಾಗಿ ₹25,000 ಹಣವನ್ನು ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಪಡೆದುಕೊಂಡಿದ್ದ. ಆ ಬಳಿಕ ತಮ್ಮ ಮುಖ್ಯ ಗುರೂಜಿ ಎಂಬುವವರ ನಂಬರ್ ನೀಡಿ, ಅವರೊಂದಿಗೂ ಮಾತನಾಡಿಸಿ ಸಂತ್ರಸ್ತೆಯ ಹಾಗೂ ಅವರ ತಾಯಿಯ ಹಸ್ತ ಮತ್ತು ಭಾವಚಿತ್ರಗಳನ್ನು ವಾಟ್ಸಾಪ್ ಮೂಲಕ ತರಿಸಿಕೊಂಡಿದ್ದರು.
ತಾಯಿಯ ಜೀವಕ್ಕೆ ಅಪಾಯವಿದೆ ಎಂದು ಪದೇ ಪದೇ ಹೆದರಿಸುತ್ತಾ, ಸುಳ್ಳು ಪೂಜೆಯ ಫೋಟೋಗಳನ್ನು ಕಳುಹಿಸಿ ನಂಬಿಕೆ ದ್ರೋಹ ಎಸಗಿದ್ದಾರೆ. ನರ್ಸ್ ಬಳಿ ಹಂತ ಹಂತವಾಗಿ ಒಟ್ಟು ₹1,84,302 ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀರು ತನಿಖೆ ನಡೆಸುತ್ತಿದ್ದಾರೆ.
