ಬಸ್ಸಿನಲ್ಲಿ ಟಿಕೆಟ್‌ ಮಾಡಿಸಲು ವ್ಯಾನಿಟಿ ಬ್ಯಾಗ್‌ ತೆರೆದ ಮಹಿಳೆ ಕಂಗಾಲು, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ನಗರದ KSRTC ಬಸ್ ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ ಕಳ್ಳತನ ಮಾಡಿರುವ ಮತ್ತೊಂದು ಪ್ರಕರಣ ವರದಿಯಾಗಿದೆ. ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ ₹50 ಸಾವಿರ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಶಿಕಾರಿಪುರ ತಾಲೂಕಿನ ಉಡುಗಣಿ ಗ್ರಾಮದ ಕವಿತಾ (48) ಒಡವೆ ಕಳೆದುಕೊಂಡವರು. ಬೆಂಗಳೂರಿನಲ್ಲಿ ಸಂಬಂಧಿಕರ ಮದುವೆ ಮುಗಿಸಿಕೊಂಡು ವಾಪಸಾಗಿದ್ದ ಕವಿತಾ, ಜೂನ್ 26ರಂದು ಸಂಜೆ ಉಡುಗಣಿ ಗ್ರಾಮಕ್ಕೆ ತೆರಳಲು ಶಿವಮೊಗ್ಗ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 10ರಲ್ಲಿ ಕಾಯುತ್ತಿದ್ದರು.

KSRTC-Bus-Stand-In-Shimoga

ಸಂಜೆ ವೇಳೆಗೆ ಶಿಕಾರಿಪುರ ಕಡೆಗೆ ಹೋಗುವ ಬಸ್ ಬಂದಾಗ ಭಾರಿ ಜನದಟ್ಟಣೆ ಇತ್ತು. ಆದ್ದರಿಂದ ಬಸ್‌ ಹತ್ತಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಬಂದ ಮತ್ತೊಂದು ಬಸ್ ಹತ್ತಿ ಕುಳಿತು, ಟಿಕೆಟ್ ಪಡೆಯಲು ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ಜಿಪ್ ತೆರೆದಿರುವುದು ಗಮನಕ್ಕೆ ಬಂದಿದೆ. ಬ್ಯಾಗ್‌ನಲ್ಲಿದ್ದ ಒಡವೆ ಬಾಕ್ಸ್ ನಾಪತ್ತೆಯಾಗಿದ್ದವು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಬಾಕ್ಸ್‌ನಲ್ಲಿ ಸುಮಾರು 20 ವರ್ಷಗಳ ಹಿಂದೆ ಖರೀದಿಸಿದ್ದ ಅಂದಾಜು ₹30,000 ಮೌಲ್ಯದ 13 ಗ್ರಾಂ ತೂಕದ ಒಂದು ಜೊತೆ ಚಿನ್ನದ ಮುತ್ತಿನ ಓಲೆ, ಅಂದಾಜು ₹20,000 ಮೌಲ್ಯದ 6 ಗ್ರಾಂ ತೂಕದ ಚಿನ್ನದ ಎಳೆ ಇತ್ತು. ಮೊದಲ ಬಸ್ ಹತ್ತುವ ಸಂದರ್ಭ ಉಂಟಾದ ಜನದಟ್ಟಣೆಯಲ್ಲೆ ಕಳ್ಳರು ವ್ಯಾನಿಟಿ ಬ್ಯಾಗ್‌ನಿಂದ ಅಭರಣಗಳನ್ನು ಕದ್ದಿರಬಹುದು ಎಂದು ಆರೋಪಿಸಿ ಕವಿತಾ ಅವರು ದೂರು ನೀಡಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.