ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | CRIME | 10 ಮೇ 2022
ಶಿವಮೊಗ್ಗದ ಸೂಳೆಬೈಲು ಬಡಾವಣೆಯಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮುಂದುವರೆದಿದೆ. ಮೂರು ದಿನದ ಅಂತರದಲ್ಲಿ ನಾಲ್ಕು ಕಾರುಗಳ ಗಾಜು ಒಡೆಯಲಾಗಿದೆ. ಇದರಿಂದ ನಗರದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗ ಭೀತಿ ಎದುರಾಗಿದೆ. ಹಾಗಾಗಿ ಬಡಾವಣೆಯಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಳ ಮಾಡಲಾಗಿದೆ.
ಘಟನೆ 1 : ಮೇ 6ರಂದು ರಾತ್ರಿ ಶಿವಮೊಗ್ಗದಿಂದ ಮತ್ತೂರು ಗ್ರಾಮಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ರಾಡ್’ನಿಂದ ದಾಳಿ ಮಾಡಲಾಗಿತ್ತು. ಇದರಿಂದ ಸೂಳೆಬೈಲು ವ್ಯಾಪ್ತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಘಟನೆ 2 : ಕಾರಿನ ಮೇಲೆ ದಾಳಿಯ ಬೆನ್ನಿಗೆ ಸೂಳೆಬೈಲಿನ ಇಂದಿರಾನಗರ ಬಡಾವಣೆಯ ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಮನೆಗಳ ಕಿಟಕಿ ಗಾಜು ಒಡೆಯಲಾಗಿದೆ. ಈ ಸಂಬಂಧ ಮೂರು ಪ್ರಕರಣ ದಾಖಲಾಗಿದೆ.
ಘಟನೆ 3 : ಮೇ 9ರ ಮಧ್ಯರಾತ್ರಿ 2 ಗಂಟೆಗೆ ನಾಲ್ವರು ಮುಸುಕುಧಾರಿಗಳು ಕಾರುಗಳ ಮೇಲೆ ದಾಳಿ ಮಾಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರುಗಳ ಮೇಲೆ ದಾಳಿ ಮಾಡಿದ್ದಾರೆ. ಗಾಜುಗಳನ್ನು ಒಡೆದು ಹಾಕಿದ್ದಾರೆ.
ನಿಗಿನಿಗಿ ಕೆಂಡದಂತಾಗಿದ್ದ ಸೂಳೆಬೈಲು
ಮೇ 6ರಂದು ಚಲಿಸುತ್ತಿದ್ದ ಕಾರನ್ನು ಹಿಂಬಾಲಿಸಿ ದಾಳಿ ನಡೆಸಲಾಗಿದೆ. ಕಾರಿನ ಹಿಂಬದಿ ಗಾಜು ಪುಡಿಯಾಗಿದೆ. ಬೈಕ್’ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಾಡ್’ನಿಂದ ದಾಳಿ ನಡೆಸಿ, ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದಾರೆ ಎಂದು ದೂರಿನಲ್ಲಿಆರೋಪಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಗುಂಪುಗೂಡಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಇದಕ್ಕೆ ಪ್ರತಿಯಾಗಿ ಸೂಳೆಬೈಲಿನ ಇಂದಿರಾ ನಗರದಲ್ಲಿ ಕೆಲವು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಮನೆಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಲಾಗಿದೆ. ವಾಹನವೊಂದಕ್ಕೆ ಹಾನಿ ಮಾಡಲಾಗಿದೆ. ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ದಾಳಿಕೋರರು ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಂದೋಬಸ್ತ್ ಮದ್ಯೆ ಮತ್ತೊಂದು ದಾಳಿ
ಕಾರಿನ ಮೇಲೆ ದಾಳಿ ಮತ್ತು ಪ್ರತಿದಾಳಿ ಹಿನ್ನೆಲೆ ಸೂಳೆಬೈಲು ಮುಖ್ಯ ರಸ್ತೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ರಾತ್ರಿ ವೇಳೆ ಜನರು ಗುಂಪು ಸೇರದಂತೆ ನಿಯಂತ್ರಿಸಿದ್ದರು. ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದರು. ಆದರೆ ಮೇ 9ರ ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ಊರುಗಡೂರು ಬಡಾವಣೆಯಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಊರುಗಡೂರಿನ ಕೊನೆ ಭಾಗದಲ್ಲಿ ದಾಳಿಯಾಗಿದೆ. ಚಾನೆಲ್ ಏರಿ ಕಡೆಯಿಂದ ಬರುವ ನಾಲ್ವರು ದುಷ್ಕರ್ಮಿಗಳು ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರುಗಳ ಮೇಲೆ ದಾಳಿ ಮಾಡಿದ್ದಾರೆ. ಗಾಜುಗಳನ್ನು ಒಡೆದು ಹಾಕಿದ್ದಾರೆ. ಈ ದುಷ್ಕರ್ಮಿಗಳು ತಮ್ಮ ಮುಖ ಕಾಣದಂತೆ ಬಟ್ಟೆಯಿಂದ ಮುಚ್ಚಿಕೊಂಡಿದ್ದಾರೆ. ನಾಲ್ವರ ಕೈಯಲ್ಲೂ ರಾಡ್’ಗಳಿವೆ. ಮುಸುಕುಧಾರಿಗಳ ದುಷ್ಕೃತ್ಯ ಮನೆಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.
ಪೊಲೀಸ್ ಇಲಾಖೆಗೆ ಸವಾಲಾದ ಪ್ರಕರಣ
ಮೂರು ದಿನದ ಅಂತರದಲ್ಲಿ ನಾಲ್ಕು ಕಾರುಗಳ ಮೇಲೆ ದಾಳಿಯಾಗಿದೆ. ಇದು ಪೊಲೀಸ್ ಇಲಾಖೆಗೆ ಸವಾಲಿನ ಪ್ರಕರಣವಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು, ‘ಮೇ 6ರಂದು ಕಾರಿನ ಮೇಲೆ ದಾಳಿ ನಡೆಸಿದ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳು ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಉಳಿದ ಮೂವರು ಈ ದಾಳಿಗೂ ಮೊದಲು ದಾಳಿಕೋರರ ಜೊತೆಗೆ ಮದ್ಯ ಸೇವಿಸಿದ್ದರು. ಈ ವೇಳೆ ದಾಳಿ ಕುರಿತು ಸಂಚು ರೂಪಿಸಿದ್ದರು’ ಎಂದು ತಿಳಿಸಿದ್ದಾರೆ.
‘ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರುಗಳ ಮೇಲೆ ಮುಸುಕುಧಾರಿಗಳು ದಾಳಿ ಮಾಡಿದ್ದಾರೆ. ಇದರ ಸಿಸಿಟಿವಿ ದೃಶ್ಯಾವಳಿಯನ್ನು ಪಡೆದುಕೊಂಡಿದ್ದೇವೆ. ನಾಲ್ವರ ಪೈಕಿ ಒಬ್ಬನ ಸುಳಿವು ಪತ್ತೆಯಾಗಿದೆ. ಶೀಘ್ರದಲ್ಲೇ ನಾಲ್ವರು ಆರೋಪಿಗಳನ್ನು ಬಂಧಿಸುತ್ತೇವೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.
ಸೂಳೆಬೈಲಿನಲ್ಲಿ ಪ್ಯಾಟ್ರೋಲಿಂಗ್ ಹೆಚ್ಚಳ
ಕಾರುಗಳ ಮೇಲೆ ದಾಳಿ ಮತ್ತು ಬಿಗುವಿನ ವಾತಾವರಣದ ಹಿನ್ನೆಲೆ ಸೂಳೆಬೈಲು, ಊರುಗಡೂರು ಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಳ ಮಾಡಲಾಗಿದೆ. ಕೆ.ಎಸ್.ಆರ್.ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ರಾತ್ರಿ ವೇಳೆ ಪ್ಯಾಟ್ರೋಲಿಂಗ್ ಹೆಚ್ಚಳ ಮಾಡಲಾಗಿದೆ.
‘ಸೂಳೆಬೈಲಿನಲ್ಲಿ ರಾತ್ರಿ ವೇಳೆ ಬಂದೋಬಸ್ತ್ ಹೆಚ್ಚಳ ಮಾಡಲಾಗಿದೆ. ಓರ್ವ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕೆ.ಎಸ್.ಆರ್.ಪಿ ತುಕಡಿಯನ್ನು ಕೂಡ ನೀಯೋಜನೆ ಮಾಡಲಾಗಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
‘ಹಿಂದೆ ಯಾರೋ ಇದ್ದಾರೆ’
ಇನ್ನು, ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ‘ದಾಳಿಕೋರರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ದುಷ್ಕರ್ಮಿಗಳ ಹಿಂದೆ ಯಾರೋ ಒಬ್ಬ ಮನುಷ್ಯ ಇರಲಬೇಕಲ್ಲ. ಆತನನ್ನು ಪತ್ತೆ ಹಚ್ಚುತ್ತೇವೆ’ ಎಂದು ತಿಳಿಸಿದ್ದಾರೆ.
ಪೊಲೀಸ್ ಠಾಣೆಗೆ ಹೆಚ್ಚಿದ ಒತ್ತಡ
ಸೂಳೆಬೈಲು ಮತ್ತು ಊರುಗಡೂರಿನಲ್ಲಿ ಕಾರುಗಳ ಮೇಲಿನ ದಾಳಿ ಬೆನ್ನಿಗೆ ಪೊಲೀಸ್ ಠಾಣೆಗೆ ಒತ್ತಡ ಕೇಳಿ ಬಂದಿದೆ. ಅತ್ಯಂತ ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಸೂಳೆಬೈಲಿನಲ್ಲಿ ಪೊಲೀಸ್ ಠಾಣೆ ಅಥವಾ ಉಪ ಠಾಣೆ ಸ್ಥಾಪಿಸಬೇಕು ಎಂಬ ಒತ್ತಾಯ ಆರಂಭವಾಗಿದೆ.
‘ಪೊಲೀಸ್ ಠಾಣೆ ಸ್ಥಾಪನೆ ಕುರಿತು ವರದಿ ಸಿದ್ದಪಡಿಸಲಾಗುತ್ತಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ. ಸದ್ಯ ಸೂಳೆಬೈಲು ವ್ಯಾಪ್ತಿಯು ತುಂಗಾ ನಗರ ಠಾಣೆ ವ್ಯಾಪ್ತಿಗೆ ಒಳಪಡುತ್ತದೆ. ಸ್ಥಳೀಯವಾಗಿಯೇ ಠಾಣೆ ಅಥವಾ ಉಪಠಾಣೆ ಸ್ಥಾಪನೆಯಾದರೆ ತಕ್ಷಣಕ್ಕೆ ಪೊಲೀಸರು ಪ್ರತಿಕ್ರಿಯೆ ನೀಡಲು ಅನುಕೂಲವಾಗಲಿದೆ ಎಂಬ ಅಭಿಪ್ರಾಯವಿದೆ.
ಸದ್ಯ ಸೂಳೆಬೈಲು ಮತ್ತು ಊರುಗಡೂರಿನಲ್ಲಿ ಪರಿಸ್ಥಿತಿ ತಿಳಿಯಾಗಿದೆ. ಆದರೆ ಸಣ್ಣ ವಿಚಾರವು ಶಿವಮೊಗ್ಗ ನಗರದಲ್ಲಿ ಮತ್ತೆ ಪ್ರಕ್ಷುಬ್ದಗೊಳಿಸುವ ಆತಂಕವಿದೆ. ಹಾಗಾಗಿ ನಗರದಲ್ಲಿಬಂದೋಬಸ್ತ್ ಹೆಚ್ಚಳ ಮಾಡಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಅಗತ್ಯ ಕಾನೂನು ಕ್ರಮವನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ – ಸೂಳೆಬೈಲಿನಲ್ಲಿ ಕಾರು ಗ್ಲಾಸ್ ಒಡೆದ ಕೇಸ್, ಐವರು ಅರೆಸ್ಟ್, ಕೃತ್ಯಕ್ಕೆ ಮೊದಲೇ ನಡೆದಿತ್ತಾ ಸಂಚು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422