ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕಾಗಿ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಯೊಬ್ಬನ ಮೇಲೆ ಮೂವರು ಸಹ-ಕೈದಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ. (ಈ ಸುದ್ದಿಯನ್ನು ಇನ್ನು 50 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಹಲ್ಲೆಗೊಳಗಾದ ಕೈದಿಯನ್ನು ದರ್ಶನ್ (21) ಎಂದು ಗುರುತಿಸಲಾಗಿದೆ. ಮಧು ಅಲಿಯಾಸ್ ಸಂದೀಪ್, ಬಾಬು ಟಿ. ಅಲಿಯಾಸ್ ಜೋಶ್ವಾ ಹಾಗೂ ರೋಷನ್ ಅಲಿಯಾಸ್ ತನ್ನು ಹಲ್ಲೆ ನಡೆಸಿದ ಸಹ ಕೈದಿಗಳು.

ಹಲ್ಲೆಗೆ ಕಾರಣವೇನು? ಆಗಿದ್ದೇನು?
ಕಾರಾಗೃಹದ ಕುಮುದ್ವತಿ ವಿಭಾಗದ ಕೊಠಡಿ ಸಂಖ್ಯೆ 10ರಲ್ಲಿ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಮೂವರು ಆರೋಪಿಗಳು ದರ್ಶನ್ ಎಂಬಾತನಿಗೆ ಹೊಡೆದು, ಒದ್ದಿದ್ದಾರೆ. ಪರಿಣಾಮ ದರ್ಶನ್ನ ಕಿವಿ ಹಾಗೂ ಎದೆಯ ಎಡಭಾಗಕ್ಕೆ ಪೆಟ್ಟಾಗಿದೆ. ತಕ್ಷಣವೇ ಕರ್ತವ್ಯದಲ್ಲಿದ್ದ ಜೈಲು ಸಿಬ್ಬಂದಿ ಗಲಾಟೆ ಬಿಡಿಸಿದ್ದಾರೆ. ಆದರೆ ತನಗೆ ಪೆಟ್ಟಾಗಿರುವ ಕುರಿತು ದರ್ಶನ್ ತಿಳಿಸಿರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಕುರಿತು ಯಾರಿಗಾದರೂ ತಿಳಿಸಿದರೆ ಮತ್ತೆ ಹೊಡೆಯುವುದಾಗಿ ಆರೋಪಿಗಳು ದರ್ಶನ್ಗೆ ಬೆದರಿಕೆ ಹಾಕಿದ್ದರು.
ಮರುದಿನ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ. ಮಹದೇವ ನಾಯ್ಕ್ ಅವರ ರೌಂಡ್ಸ್ ಬಂದಾಗ ಗಾಯಾಳು ಕೈದಿ ಹಲ್ಲೆಯ ಕುರಿತು ತಿಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ವಿಚಾರಣಾಧೀನ ಕೈದಿ ನೀಡಿದ ದೂರಿನ ಮೇರೆಗೆ ಮುಖ್ಯ ಅಧೀಕ್ಷಕರು ತುಂಗಾ ನಗರ ಠಾಣೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.