ಅರಣ್ಯ ಅಧಿಕಾರಿ ಕಚೇರಿ ಗೇಟ್‌ಗೆ ಆನೆ ಫೋಟೊ ಕಟ್ಟಿ ಶ್ರದ್ಧಾಂಜಲಿ ಸಭೆ, ವಿಭಿನ್ನ ಪ್ರತಿಭಟನೆ, ಕಾರಣವೇನು?

ಶಿವಮೊಗ್ಗ: ಸಕ್ರೆಬೈಲು ಬಿಡಾರ ಶೌರ್ಯ ಆನೆಯ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ವಿಭಿನ್ನವಾಗಿ ಪ್ರತಿಭಟನೆ ನಡೆಸಿದವು. ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಎಫ್‌ಒ ಕಚೇರಿ ಮುಂಭಾಗ ಶೌರ್ಯ ಆನೆಯ ಫೋಟೊಗೆ ಪೂಜೆ ಸಲ್ಲಿಸಿ ಮೌನವಾಗಿ ಆಕ್ರೋಶ ಹೊರಹಾಕಿದರು. (ಈ ಸುದ್ದಿಯನ್ನು ಇನ್ನು 69 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಡಿಎಫ್‌ಒ ಕಚೇರಿಯ ಗೇಟ್‌ಗೆ ಶೌರ್ಯ ಆನೆಯ ಫೋಟೊ ಕೊಟ್ಟಿ, ಅದಕ್ಕೆ ಹೂವಿನ ಹಾರ ಹಾಕಿ, ಆರತಿ ಬೆಳಗಿದರು. ಶೌರ್ಯ ಆನೆ ಮೃತಪಟ್ಟು ಒಂದು ತಿಂಗಳಾದ ಹಿನ್ನೆಲೆ ಪೂಜೆ ನೆರವೇರಿಸಲಾಯಿತು. ಶಿವಮೊಗ್ಗದ ಪರಿಸರ ಆಸಕ್ತರು, ಪ್ರಾಣಿ ಪ್ರಿಯಕರು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ವಿಭಿನ್ನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Animal-lovers-tie-elephant-Shourya-Elephant-Photo.webp

ಈ ಸಂದರ್ಭ ಮಾತನಾಡಿದ ಮಲೆನಾಡು ವನ್ಯಜೀವಿ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಟ್ರಸ್ಟಿ ದಿಲೀಪ್‌ ನಾಡಿಗ್‌, ಶೌರ್ಯ ಆನೆ ಮೃತಪಟ್ಟು ಒಂದು ತಿಂಗಳಾಗಿದೆ. ಅರಣ್ಯ ಇಲಾಖೆ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಬೇಕಿತ್ತು. ಆದರೆ ಅಧಿಕಾರಿಗಳು ಜಡ್ಡು ಹಿಡಿದಿದ್ದು, ಪ್ರಾಣಿಗಳ ವೇದನೆ ಅರಿವಾಗುವುದಿಲ್ಲ. ಶೌರ್ಯ ಆನೆಯ ಸಾವಿನ ಕುರಿತು ಅಸಡ್ಡೆ. ಆದ್ದರಿಂದ ವಿಭಿನ್ನವಾಗಿ ಪ್ರತಿಭಟಿಸಿದ್ದೇವೆ. ಇಂತಹ ಘಟನೆಗಳು ಮತ್ತೆ ಘಟಿಸಬಾರದು. ಶೌರ್ಯ ಆನೆ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕು. ಬಾಲಣ್ಣ ಮತ್ತು ಮಣಿಕಂಠ ಆನೆಗಳ ಆರೋಗ್ಯದಲ್ಲಿಯು ಸಮಸ್ಯೆ ಉಂಟಾಗಿದೆ. ಆನೆಗಳಿಗೆ ಚಿಕಿತ್ಸೆ ಕೊಡಲು ವೈದ್ಯರಿಲ್ಲ. ಆನೆಗಳನ್ನು ಈ ರೀತಿ ಹಿಂಸೆ ಕೊಡುವ ಬದಲು ಸಕ್ರೆಬೈಲು ಬಿಡಾರವನ್ನು ಮುಚ್ಚುವುದು ಒಳಿತು ಎಂದು ಆಗ್ರಹಿಸಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಅಕ್ಟೋಬರ್‌ 1ರಂದು ಸಕ್ರೆಬೈಲು ಆನೆ ಬಿಡಾರದಲ್ಲಿದ್ದ ಶೌರ್ಯ (35) ಆನೆ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿತ್ತು. ಆನೆಯ ಎಡಗಡೆಯ ಹಿಂಬದಿ ಕಾಲಲಿನ ತೊಡೆ ಭಾಗದಲ್ಲಿ ತೀವ್ರ ಗಾಯವಾಗಿತ್ತು. ಅದು ಕೊಳೆತ ಸ್ಥಿತಿಯಿಂದಾಗಿ ಶೌರ್ಯ ಆನೆ ನರಳುತ್ತಿತ್ತು. ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭಿಸದೆ ಆನೆ ಮೃತಪಟ್ಟಿದೆ ಎಂದು ಪ್ರಾಣಿ ಪ್ರಿಯರು ಆರೋಪಿಸಿದ್ದಾರೆ.